ಉನ್ಮಾದ ರೋಗ: ಸಂವೇದನವಾಹಕ (ಸೆನ್ಸರಿ) ಅಥವಾ ಚಾಲಕ (ಮೋಟಾರ್) ಅಥವಾ ಮಾನಸಿಕ ರೋಗಲಕ್ಷಣಗಳನ್ನು ಉಂಟುಮಾಡುವ ಒಂದು ವಿಧದ ಮಾನಸಿಕ ಅವ್ಯವಸ್ಥೆ (ಹಿಸ್ಟೀರಿಯ). ಗರ್ಭಕೋಶದ ವ್ಯತ್ಯಾಸಗಳಿಂದ ಉನ್ಮಾದ ಕಾಣಿಸಿಕೊಳ್ಳುವುದೆಂಬ ತಪ್ಪು ನಂಬುಗೆ ಹಿಂದಿನ ಕಾಲದಲ್ಲಿತ್ತು. ಅದಕ್ಕೆ ಸಂಬಂಧಿಸಿದ ಗ್ರೀಕ್ ಶಬ್ದ ಹಿಸ್ಟಿರಾದಿಂದ ಹಿಸ್ಟೀರಿಯ ಎಂಬ ಶಬ್ದ ಬಂದಿದೆ. ಹಿಸ್ಟಿರಾ ಶಬ್ದಕ್ಕೆ ಗರ್ಭಕೋಶವೆಂದು ಅರ್ಥ. ಆದರೆ ಈ ವ್ಯಾಧಿ ಹೆಂಗಸರಿಗೇ ಸೀಮಿತವಾದದ್ದಲ್ಲ. ಅಭಿವ್ಯಕ್ತಿಗೊಳ್ಳದ ಮಾನಸಿಕ ಕ್ಲೇಶ ರೋಗಲಕ್ಷಣವಾಗಿ ಪರಿವರ್ತಿತವಾಗುತ್ತದೆ. ನಮಗೆ ಗೊತ್ತಿರುವ ಯಾವ ಜೈವಿಕ ಅಥವಾ ಶಾರೀರಿಕ ರೋಗನಿದಾನಕ್ಕೂ ಇದು ಒಳಪಡುವುದಿಲ್ಲ. ಗಂಡು-ಹೆಣ್ಣು, ಚಿಕ್ಕವರು-ದೊಡ್ಡವರೆಂಬ ಭೇದವಿಲ್ಲದೆ ಯಾರಲ್ಲಾದರೂ ಇದು ತಲೆದೋರಬಹುದಾದರೂ ಮಕ್ಕಳು/ಹದಿಹರೆಯದವರಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಾನಸಿಕವಾಗಿ ದುರ್ಬಲರೂ, ಉನ್ಮಾದ ವ್ಯಕ್ತಿತ್ವ ಉಳ್ಳವರಲ್ಲಿ ಹೆಚ್ಚು. ಪುರುಷರಿಗೆ ಹೋಲಿಸಿದರೆ, ಸ್ತ್ರೀಯರಲ್ಲಿ ಹೆಚ್ಚು.
ಈ ಸಂವೇದನ ವಾಹಕ ಹಾಗೂ ಚಾಲಕ ರೋಗಲಕ್ಷಣಗಳು ನಾನಾ ಬಗೆಯಾಗಿ ಪ್ರಕಟವಾಗುತ್ತವೆ. ಇವುಗಳ ಹಿಂದಿರುವ ವ್ಯಾಕುಲತೆ ಅನೇಕವೇಳೆ ಯಾವುದೋ ದೈಹಿಕ ರೋಗಲಕ್ಷಣವಾಗಿ ಪರಿವರ್ತನೆ ಹೊಂದುತ್ತದೆ. ಮನೋಲೋಕದಿಂದ ದೈಹಿಕಕ್ಷೇತ್ರಕ್ಕೆ ಪರಿವರ್ತನೆ ಮಾಡಿಕೊಳ್ಳುವಂಥ ಪ್ರತಿಕ್ರಿಯೆಯೆಂದೇ ಇದನ್ನು ಗುರುತಿಸಲಾಗಿದೆ. ಇದೊಂದು ವಿಚಿತ್ರ ರೋಗ. ಇದರಲ್ಲಿ ಇದ್ದಕ್ಕಿದ್ದಂತೆಯೇ ಯಾವ ವಿಧವಾದ ದೈಹಿಕ ಕಾರಣವೂ ಇಲ್ಲದೆ ಒಬ್ಬ ವ್ಯಕ್ತಿ ಕುರುಡನಾಗಬಹುದು, ಕಿವುಡನಾಗಬಹುದು, ಪಾಶರ್ಚ್‌ವಾಯುಪೀಡಿತನಾಗ ಬಹುದು; ತಾನು ಯಾರೆಂಬುದನ್ನೇ ಮರೆತುಬಿಡಬಹುದು. ಉನ್ಮಾದದ ಲಕ್ಷಣಗಳು ಹಲವು ವೇಳೆ ದೈಹಿಕ ರೋಗದವಂತೆಯೇ ಇರುತ್ತವೆ. ಇದನ್ನು ಮನೋರೋಗವೆಂದು ಗುರುತಿಸುವುದು ಬಲು ಕಷ್ಟ. ಇದಕ್ಕೆ ಸಮಸ್ಯೆಗಳ ಸೂಕ್ಷ್ಮ ಅವಲೋಕನವೂ ವ್ಯಕ್ತಿಯ ಬಾಳಿನ ಪರಿಸರದ ಅಧ್ಯಯನವೂ ಆವಶ್ಯಕ. ಇದರ ವಿಚಿತ್ರ ಸ್ವರೂಪದ ಕಾರಣದಿಂದ ಮನೋರೋಗದ ಇತಿಹಾಸದಲ್ಲಿ ಈ ವ್ಯಾಧಿಗೆ ಪ್ರಮುಖ ಸ್ಥಾನವಿದೆ. ಈ ರೋಗದ ಇತಿಹಾಸವೂ ಸ್ವಾರಸ್ಯಕರವೇ.

ಮಕ್ಕಳಲ್ಲೂ ಹರೆಯದವರಲ್ಲೂ ಅನಾಹುತಗಳೋ ಯುದ್ಧದಲ್ಲಾಗುವಂತೆ ತಡೆಯಲಾರದ ತೊಡಕುಗಳೋ ಆದ ಮೇಲೆ ಉನ್ಮಾದ ಕಾಣಿಸಿಕೊಳ್ಳುವುದರಿಂದ, ಉನ್ಮಾದಕ್ಕೆ ಈಡಾಗುವ ಗುಣ ಎಲ್ಲರಲ್ಲೂ ಇರುತ್ತದೆ. ಒತ್ತಡ ಮತ್ತು ಅಹಿತಕಾರಿ ಪರಿಸರವೇ ಹೆಚ್ಚು ಮುಖ್ಯ ಕಾರಣ ಎನ್ನಬಹುದು. ಉನ್ಮಾದ ಹೊರಗೆ ಕಾಣಿಸಿಕೊಳ್ಳುವÀ ಎಷ್ಟೋ ಮುಂಚೆ ಅನುವಂಶೀಯ ಹಾಗೂ ಪರಿಸರಗಳ ದೆಸೆಯಿಂದ ರೋಗಿಯ ವ್ಯಕ್ತಿತ್ವ ದುರ್ಬಲವಾಗಿರುತ್ತದೆ. ಎಲ್ಲ ಉನ್ಮಾದ ರೋಗಿಗಳಲ್ಲೂ ಇದು ಕಾಣದಿದ್ದರೂ ಹೀಗೆ ಬದಲಾಗಿರುವವರು ಎಂದಾದರೂ ಉನ್ಮಾದಕ್ಕೆ ಈಡಾಗುವರು. ಈ ವ್ಯಕ್ತಿತ್ವದ ಅನೇಕ ಲಕ್ಷಣಗಳು ಸಮಾಜದಲ್ಲಿ ಕೆಟ್ಟವೆನಿಸಿದರೂ ರೋಗಿಯ ನಡತೆಯೆಲ್ಲ ಹೀಯಾಳಿಸುವಂತಿರುವುದಿಲ್ಲ. ಈ ರೋಗಿಗಳು ತಮ್ಮ ಅಳವು ತಮಗೆ ಸಾಕೆನಿಸದೆ, ಇನ್ನೂ ಚೆನ್ನಾಗಿ ಜೋರಾಗಿ ತೋರಿಸಿಕೊಳ್ಳಲು ಯತ್ನಿಸುವರು. ಸೋಗೂ ಹಾಕುವರು. ಆದರೆ ಅವರಿಗೇ ಇದು ಸೋಗೆಂದು ನಿಜವಾಗೂ ಅನ್ನಿಸುವುದಿಲ್ಲ. ಗೊತ್ತೂ ಆಗದು. ಆದ್ದರಿಂದ, ಇಲ್ಲಿ ಮೋಸದ ಪ್ರಶ್ನೆಯೇ ಇಲ್ಲ. ಉನ್ಮಾದ ರೋಗಿಯ ಒಳಗಿನ ತಳಮಳ, ಹೀಗೇ ನಡೆದುಕೊಳ್ಳಬೇಕೆಂಬ ನಿರ್ಧಾರ, ವಿಪರೀತ ಜಂಭ, ಠೀವಿಯ ಕಲ್ಪನೆ ಹೆಚ್ಚು. ಎಳೆತನದಲ್ಲಿ ಸರಿಯೆಂದು ಕಾಣುವ ಮನೋಕಲ್ಪನೆಗಳು ಪರಿಸರಕ್ಕೆ ಹೊಂದದಿದ್ದರೂ ಇಲ್ಲಿ ಪ್ರೌಢ ರೋಗಿಯಲ್ಲಿ ತೋರುತ್ತವೆ. ಕಲ್ಪನಾಲೋಕವೊಂದನ್ನು ಕಟ್ಟಿಕೊಂಡು ನಿಜವಾಗಿ ಅಲ್ಲೇ ಇರುವೆನೆಂದು ಆತ ಭಾವಿಸುತ್ತಾನೆ. ಅಹಂಭಾವ, ಸುಳ್ಳುತನ ಇವು ಅಪರಾಧದ ಮಟ್ಟಕ್ಕೇರಬಹುದು. ಹೆಚ್ಚು ಗಮನ ಒಲವು, ಕನಿಕರಗಳಿಗಾಗಿ ಬಹುವಾಗಿ ಹಾತೊರೆಯುವ ಈ ರೋಗಿಯ ನಡೆವಳಿಕೆಯೇ ಬದಲಾಗಿರುತ್ತದೆ. ನೋಟಕರಿಗೆ ಕೆಲವೇಳೆ ಇದು ಗೊತ್ತಾಗುವು ದಾದರೂ ಯಾವಾಗಲೂ ಇದು ವ್ಯಕ್ತವಾಗದು. ರೋಗಲಕ್ಷಣದ ಇವನ ಅಣಕು ಅಷ್ಟು ಚೆನ್ನಾಗಿರುತ್ತದೆ. ನೋವಿನ ನೆನಪುಗಳನ್ನು ಈತ ಅನುಕೂಲವಾಗಿ ಮರೆಯುತ್ತಾನೆ. ಈ ಮರೆವು ಎಷ್ಟರಮಟ್ಟಿಗೆ ನಿಜವಾದುದೆಂದು ಕಂಡುಹಿಡಿಯುವುದೂ ಕಷ್ಟವೇ. ಇನ್ನೊಬ್ಬರು ಕೊಡುವ ಸೂಚನೆಗಳಿಗೆ ಉನ್ಮಾದ ರೋಗಿ ಸುಲಭವಾಗಿ ಈಡಾಗುತ್ತಾನೆ. ಕೆಲವು ಪ್ರಕರಣ ಗಳಲ್ಲಿ ರೋಗಿ ಮಿಕ್ಕವರನ್ನು ಕಾಣುವ ನಿಟ್ಟಿನಲ್ಲಿ ಹಲವೇಳೆ ಲೈಂಗಿಕಾಂಶ ಇರುತ್ತದೆ. ಬೆಡಗು, ಒಯ್ಯಾರವಿದ್ದರೂ, ಸಂಭೋಗದಲ್ಲಿ ಆಸಕ್ತಿ ಇರುವುದಿಲ್ಲ. ಇದರಿಂದಾಗಿ ದಾಂಪತ್ಯ ವಿರಸ ಕಾಣಿಸಿಕೊಳ್ಳುತ್ತದೆ.
ಉನ್ಮಾದ ವ್ಯಕ್ತಿತ್ವವನ್ನು ಚಿಕ್ಕಂದಿನಲ್ಲೇ ಗುರುತಿಸಬಹುದು. ಆದರೆ ತೀರ ಎಳೆಯರಲ್ಲಿ ಕಾಣಬೇಕಾದರೆ ಅದು ಬಲು ಜೋರಾಗಿರಬೇಕು. ಉನ್ಮಾದ ರೋಗಿಯ ನಡೆವಳಿಕೆಯ ಕೆಲವು ಉಗ್ರ ರೂಪಗಳು ನೆರೆಯದ ಹುಡುಗಿಯರಲ್ಲಿ ಕಂಡಿವೆ.

ರೋಗಿಗೆ ಗೊತ್ತಾಗಿಯೋ ಅಥವಾ ಗೊತ್ತಾಗದೆಯೋ ಒದಗುವಂಥ ಭಾವಾವೇಶದ ಸಂದರ್ಭವೇ ಉನ್ಮಾದದ ಲಕ್ಷಣಗಳು ಹೊರಗಾಣಲು ಕಾರಣವಾಗುವ ಅಂಶ. ಒಂದು ಪೆಟ್ಟು ಗಾಯದಿಂದಾದ ತೊಂದರೆ, ಇದಕ್ಕಾಗಿ ಪರಿಹಾರ ಕೇಳಿಕೆ ಇವು ಅರೆಬರೆ ಅನುಕೂಲದ ಸರಳ ಉದಾಹರಣೆ. ಉನ್ಮಾದ ಪ್ರಕಟವಾಗಲು ಅದು ಒಳ್ಳೆಯ ಅವಕಾಶ. ವೈದ್ಯಪರೀಕ್ಷೆ ಮೇಲಿಂದ ಮೇಲೆ ಆದರಂತೂ ಇನ್ನೂ ಜೋರು. ಹೋರಾಟದ ಕಣದಲ್ಲಿರುವ ಸೈನಿಕರಲ್ಲಿ ಉನ್ಮಾದ ಸಾಮಾನ್ಯ.

ಉನ್ಮಾದ ಪುರ್ತಿಯಾಗಿ ಒಂದು ಮನೋರೋಗ. ಕೆಲವು ಬಗೆಯ ದೈಹಿಕ ರೋಗಗ ಳೊಂದಿಗೆ ಕೆಲವು ವೇಳೆ ಉನ್ಮಾದ ಕಾಣಿಸಿಕೊಳ್ಳುವುದಾದರೂ ಯಾವಾಗಲೂ ಹೀಗಾಗದು. ಇದು ಆಗ ಕಾಣಿಸಿಕೊಳ್ಳಬೇಕಾದರೂ ಹಿನ್ನೆಲೆಯಲ್ಲಿ ಮನೋರೋಗ ಇದ್ದೇ ಇರುತ್ತದೆ. ಚಿಕ್ಕಂದಿನಲ್ಲಿ ಪಾಲನೆ ಚೆನ್ನಾಗಿಲ್ಲದ್ದು ಕಾರಣವಾಗಿರುತ್ತದೆ. ಚಾಲಕ ಇಲ್ಲವೇ ಸಂವೇದನ ವಾಹಕವಾಗಿ ತೋರುವ ಉನ್ಮಾದದ ಲಕ್ಷಣಗಳು, ರೋಗಿ ತನ್ನ ಅನುಭವವನ್ನು ಎಷ್ಟು ಸುಲಭವಾಗಿ ಮೈಯಲ್ಲಿನ ಸಂಕೇತಗಳಾಗಿ ಮಾರ್ಪಡಿಸುವನೆಂಬುದನ್ನು ತೋರಿಸುತ್ತವೆ. ಅವೇ ರೋಗಲಕ್ಷಣಗಳಾಗಿ ಹೊರದೋರುತ್ತವೆ. ಉನ್ಮಾದದಲ್ಲಿ ಈ ಪರಿವರ್ತನ ಗುಣ ಇರುವುದು ಮುಖ್ಯವಲ್ಲ. ಸುಲಭವಾಗಿ ಈಡಾಗುವುದೂ ಜೋರಾಗುವುದೂ ಮುಖ್ಯ. ಇದು ನೋವಿನ ರೋಗವಾಗಿ ಮೈಯಲ್ಲಿ ಕಾಣಿಸಿಕೊಳ್ಳಬಹುದು. ಇದು ರೋಗಿಗೂ ಬೇಡವಾದದ್ದು. ಆದ್ದರಿಂದಲೇ ರೋಗಿ ಇದನ್ನು ಕೊಂಚಮಟ್ಟಿಗೆ ಎಚ್ಚರಕ್ಕೆ ತಾಕದಂತೆ ನೋಡಿಕೊಳ್ಳುತ್ತಾನೆ. ಮೈಯಲ್ಲಿ ಸಂಕೇತವಾಗಿ ಕಂಡದ್ದನ್ನು ಅನುಭವಿಸಬಹುದು, ಇದು ಬೇಕೆನಿಸಲೂಬಹುದು. ಆದರೆ ಇದು ಶಾರೀರಿಕವಾಗಿಯೇ ಪ್ರಕಟವಾಗಬೇಕಿಲ್ಲ. ಎಂದಿನದೋ ನೋವಿನ ಅನುಭವಗಳನ್ನು ಎಚ್ಚರದ ಮನಕ್ಕೆ ತರಗೊಡದ ಮನೋವೈಕಲ್ಯವಾಗಿಯೂ (ಸೈಕೋಸಿಸ್), ಮರೆವೆಚ್ಚರವಾಗಿಯೂ (ಫ್ಯೂಗ್) ಇದು ಪರಿಣಾಮ ಹೊಂದಬಹುದು. ಇದು ಯಾವ ರೂಪ ತಳೆಯುತ್ತದೆಯೆಂಬುದಕ್ಕೆ ಅನಂತರ ಸಂಭವಿಸುವ ಘಟನೆಗಳೂ ಕೊಂಚಮಟ್ಟಿಗೆ ಕಾರಣ. ಮನೋರೋಗದ ಹಿನ್ನೆಲೆ ಗೊತ್ತಾಗದಿದ್ದರೆ ರೋಗಿಯ ಚಿಕಿತ್ಸೆ ಬಲು ಕಷ್ಟ.

ಇತಿಹಾಸ
ಈ ರೋಗದ ವಿಚಾರದಲ್ಲಿ, ನಮಗೆ ದೊರೆಯುವ ಅತ್ಯಂತ ಪ್ರಾಚೀನ ವೈದ್ಯಕೀಯ ಅಭಿಪ್ರಾಯವೆಂದರೆ ಪ್ರಸಿದ್ಧ ಗ್ರೀಕ್ ವೈದ್ಯ ಹಿಪಾಕ್ರಟಿಸ್ನದು. ಈ ರೋಗ ಹೆಂಗಸರಲ್ಲಿ, ಅದರಲ್ಲಿಯೂ ನವಯುವತಿಯರಲ್ಲಿ ಉಂಟಾಗುತ್ತದೆ ಎಂದು ಆತ ನಂಬಿದ್ದ. ಮಗುವನ್ನು ಪಡೆಯಬೇಕೆಂಬ ಬಯಕೆ ಭಂಗವಾದಾಗ, ಗರ್ಭಕೋಶ ದೇಹದ ನಾನಾ ಭಾಗಗಳಲ್ಲಿ ಅಲೆಯುವುದರಿಂದ ಈ ರೋಗ ಸಂಭವಿಸುತ್ತದೆಂಬುದು ಆತನ ಅಭಿಪ್ರಾಯ. ಗರ್ಭಕೋಶ ಗಂಟಲಿನಲ್ಲಿ ಸಂಚರಿಸುವಾಗ ಕಂಠ ಬಿಗಿಯುವ ವೇದನೆಯೂ ಗುಲ್ಮದಲ್ಲಿ ಪ್ರವೇಶಿಸಿದಾಗ ಕೋಪೋದ್ರೇಕಗಳ ಅನುಭವವೂ ಹೀಗೆ ನಾನಾ ವಿಕಾರಗಳು ಉಂಟಾಗುತ್ತವೆ ಎಂಬುದು ಅಂದಿನ ನಂಬಿಕೆ. ಈ ರೋಗಕ್ಕೆ ಮದುವೆಯೇ ಸೂಕ್ತ ಪರಿಹಾರವೆಂದು ಹಿಪಾಕ್ರಟಿಸ್ ಪ್ರತಿಪಾದಿಸಿದ್ದ. ಅಲ್ಲದೆ ಈ ರೋಗದಲ್ಲಿ ಪರಿಸರ ಹಾಗೂ ಲೈಂಗಿಕ ತೊಂದರೆ ಗಳೂ ಪ್ರಮುಖ ಪಾತ್ರ ವಹಿಸುತ್ತವೆಯೆಂದು ಆತನ ಊಹೆ. ಹಿಪಾಕ್ರಟಿಸನ ಅನಂತರ ಈ ರೋಗದ ಚಿಕಿತ್ಸೆಗೆ ಹೆಚ್ಚು ಗಮನಕೊಟ್ಟ ವೈದ್ಯನೆಂದರೆ ಮೆಸ್ಮರ್. ಈ ರೋಗದ ಸೂಕ್ತ ಚಿಕಿತ್ಸೆಗೆ ನಾಂದಿ ಹಾಡಿದ್ದು ಆತನೇ (1766). ಆತ ಅರಿವಿಲ್ಲದೆಯೇ ರೋಗಚಿಕಿತ್ಸೆಯನ್ನು ಆರಂಭಿಸಿದ. ಜೀವ ಅಯಸ್ಕಾಂತತ್ವ ಎಂಬುದು ಆತ ಇದಕ್ಕೆ ಇಟ್ಟ ಹೆಸರು. ಈ ದೃಷ್ಟಿಯಿಂದಲೇ ಆತ ಚಿಕಿತ್ಸಾ ವಿಧಾನವೊಂದನ್ನು ತನ್ನ ರೋಗಿಗಳ ಮೇಲೆ ಪ್ರಯೋಗಿಸಿದ. ಅಯಸ್ಕಾಂತಗಳನ್ನು ರೋಗಿಗಳಿಗೆ ಮುಟ್ಟಿಸಿದಾಗ ಅವುಗಳಿಂದ ಒಂದು ರೀತಿಯ ದ್ರವ ರೋಗಿಗೆ ಪ್ರವಹಿಸಿ ರೋಗವನ್ನು ಗುಣಪಡಿಸುತ್ತದೆ ಎಂಬುದು ಆತನ ನಂಬಿಕೆ. ಮೆಸ್ಮರನ ಅನಂತರ ಈ ವಿಧಾನ ಮೆಸ್ಮರಿಸಂ ಎಂದೇ ಪ್ರಸಿದ್ಧವಾಗಿ, ಅನಂತರ ಇದರ ಹೆಸರು ತಂತು ಸಂಮೋಹನೆ (ನ್ಯೂರೋಹಿಪ್ನಾಸಿಸ್) ಎಂದು ಮಾರ್ಪಾಟಾಗಿ ಕೊನೆಗೆ ಇಂಗ್ಲೆಂಡಿನ ಜೇಮ್ಸ್‌ ಬ್ರಾಯ್ಡ್‌ ಕೊಟ್ಟ ಸಂಮೋಹನ ಅಥವಾ ಮೋಹನಿದ್ರೆ (ಹಿಪ್ನಾಸಿಸ್) ಎಂಬ ಹೆಸರಿನಿಂದ ಪ್ರಚಲಿತ ವಾಯಿತು. ವೈದ್ಯನ ಮಾತುಗಳೂ ಸಂಕೇತಗಳೂ ರೋಗಿಯ ಮನಸ್ಸಿನಲ್ಲಿ ಭಾವಪ್ರೇರಣೆಯ ನ್ನುಂಟುಮಾಡಿ ರೋಗಿ ಗುಣಮುಖವಾಗುವಂತೆ ಮಾಡುತ್ತವೆ ಎಂದು ಮೊಟ್ಟಮೊದಲು ಪ್ರತಿಪಾದಿಸಿದವನೇ ಜೇಮ್ಸ್‌ ಬ್ರಾಯ್ಡ್‌.
ಉನ್ಮಾದ ರೋಗದ ವಿಧಿವತ್ತಾದ ಅಧ್ಯಯನವನ್ನು ಆರಂಭಿಸಿದ ಕೀರ್ತಿ ಅಂದು ಜಗತ್ಪ್ರಸಿದ್ಧ ತಂತು ವೈದ್ಯನೆನಿಸಿದ್ದ ಚಾರ್ಕಾಟ್ಗೆ ಸಲ್ಲಬೇಕು. ಆತ ಈ ರೋಗದ ಚಿಕಿತ್ಸೆಗಾಗಿ ಸಂಮೋಹನ ವಿಧಾನವನ್ನು ಪ್ರಭಾವಪೂರ್ಣವಾಗಿ ಉಪಯೋಗಿಸಿದ. ಮುಂದೆ ಸಿಗ್ಮಂಡ್ ಫ್ರಾಯ್ಡ್‌ ಪ್ರತಿಪಾದಿಸಿದ ಲೈಂಗಿಕತೆಯ ಪ್ರಾಮುಖ್ಯ ಈ ರೋಗದಲ್ಲಿ ಎಷ್ಟೆಂಬುದನ್ನು ಮೊಟ್ಟಮೊದಲಿಗೆ ಮನಗಂಡವನು ಆತನೇ. ಈ ರೋಗನಿದಾನಕಾರ್ಯದಲ್ಲಿ ಅವನ ಸಿದ್ಧಾಂತಗಳಿಗೆ ಹೆಚ್ಚು ಮಹತ್ತ್ವ ಕೊಡಲಾಯಿತು.

ಒಂದನೆಯ ಮಹಾಯುದ್ಧದಲ್ಲಿ ಅನೇಕ ಸೈನಿಕರು ಮನೋವಿಕಾರಗಳಿಗೆ ತುತ್ತಾದರು. ಆ ರೋಗಿಗಳ ಅಧ್ಯಯನದಿಂದ ಅತ್ಯಂತ ಪ್ರಮುಖವಾದ ಒಂದು ಸತ್ಯ ಸ್ಥಾಪಿತವಾಯಿತು. ಈ ರೋಗ ಹೆಂಗಸರಿಗೆ ಮಾತ್ರ ಮೀಸಲಾಗಿರದೆ, ಗಂಡಸರಲ್ಲಿಯೂ ಉಂಟಾಗುತ್ತದೆ ಎಂಬುದೇ ಆ ಸತ್ಯ. ಆಧುನಿಕ ಮನೋವೈದ್ಯಕೀಯ ಕ್ಷೇತ್ರದಲ್ಲಿ, ಉನ್ಮಾದ ರೋಗವನ್ನು ಅನೇಕ ಮನೋವಿಕಾರಗಳ ಒಂದು ಸಮೂಹವೆಂದು (ಸಿಂಡ್ರೋಮಾ) ಪರಿಗಣಿಸಲಾಗಿದೆ. ಅಲ್ಲದೆ ವಾಸ್ತವಜೀವನದ ಕಷ್ಟ ಕಾರ್ಪಣ್ಯಗಳಿಂದ ತಪ್ಪಿಸಿಕೊಳ್ಳುವ ಯಾವುದೋ ಸುಪ್ತ ಸಂಚಿನಿಂದ ವ್ಯಕ್ತಿಯಲ್ಲಿ ಈ ವರ್ತನಾವಿಕಾರಗಳು ಉಂಟಾಗುತ್ತವೆ ಎಂಬುದು ಇಂದು ಸರ್ವಮಾನ್ಯವಾಗಿದೆ. ಇದರ ಜೊತೆಗೆ, ಉನ್ಮಾದರೋಗಕ್ಕೂ ಲೈಂಗಿಕ ಅತೃಪ್ತಿ ಮತ್ತು ವಿರಸಗಳಿಗೂ ನಿಕಟ ಸಂಬಂಧವಿದೆಯೆಂಬ ಸಿದ್ಧಾಂತಕ್ಕೆ ಅನೇಕರಿಂದ, ಅದರಲ್ಲೂ ಮನೋವಿಶ್ಲೇಷಕರಿಂದ, ಮನ್ನಣೆ ದೊರಕಿದೆ.

ರೋಗಲಕ್ಷಣಗಳು
ಈ ರೋಗ ನಾನಾ ವಿಧವಾದ ಹಾಗೂ ಚಿತ್ರವಿಚಿತ್ರವಾದ ವರ್ತನಾ ವಿಕಾರಗಳ ಒಂದು ಸಮೂಹ. ರೋಗದ ಲಕ್ಷಣಗಳು ದಿಗ್ಭ್ರಮೆ ಹಿಡಿಸುವಂಥವು. ರೋಗಲಕ್ಷಣ ಗಳಿಗೆ ಶರೀರದಲ್ಲಾಗಲೀ ಮಿದುಳಿನಲ್ಲಾಗಲೀ ನ್ಯೂನತೆ, ಹಾನಿ ಇರುವುದಿಲ್ಲ. ಇವನ್ನು ಸ್ಥೂಲವಾಗಿ ಶಾರೀರಿಕ, ಸಂವೇದನಾತ್ಮಕ ಹಾಗೂ ತೋರಿಕೆಯ ರೋಗಲಕ್ಷಣಗಳೆಂದು ಮೂರು ತೆರನಾಗಿ ವಿಂಗಡಿಸಬಹುದು.
ಶಾರೀರಿಕ: ಇಂದ್ರಿಯಾನುಭವದ ನ್ಯೂನತೆ-ಯಾವುದಾದರೂ ಒಂದು ಇಂದ್ರಿಯ ಅಥವಾ ಇಂದ್ರಿಯದ ಭಾಗ ತನ್ನ ಕ್ರಿಯಾಶಕ್ತಿಯನ್ನು ಕಳೆದುಕೊಳ್ಳಬಹುದು. ಉದಾಹರಣೆಗೆ, ಸ್ಪರ್ಶ, ನೋವು ಅಥವಾ ಶೀತೋಷ್ಣ ಉದ್ದೀಪನಗಳ ಅನುಭವವನ್ನು ಚರ್ಮ ಕಳೆದುಕೊಳ್ಳ ಬಹುದು. ಅಲ್ಲದೆ ಚರ್ಮಸ್ಫುರಣದಂಥ ಅಸಾಮಾನ್ಯ ವೇದನಾನುಭವಗಳಾಗಬಹುದು. ಇವಲ್ಲದೆ ದೃಷ್ಟಿ, ಶ್ರವಣ, ಘ್ರಾಣ ಹಾಗೂ ರಸನ-ಈ ಇಂದ್ರಿಯಾನುಭವಗಳು ಲೋಪ ಹೊಂದಬಹುದು. ದೃಷ್ಟಿಮಾಂದ್ಯ, ಕುರುಡು ಮತ್ತು ಇತರ ದೃಷ್ಟಿಸಂಬಂಧಿ ಕ್ರಿಯಾಲೋಪಗ ಳಾಗುವುದೂ ಉಂಟು. ಮಧ್ಯ ವಯಸ್ಸು ಮೀರಿದ ಒಬ್ಬ ಹೆಂಗಸು ತನ್ನ ಘ್ರಾಣಶಕ್ತಿಯನ್ನೇ ಕಳೆದುಕೊಂಡಳು. ಆಕೆಗೆ ಒಬ್ಬನೇ ಮಗನಿದ್ದನೆಂದೂ ಆತ ಅತಿಯಾಗಿ ಕುಡಿದು ಮನೆಗೆ ಬಂದಾಗ ಅತನ ಉಸಿರಿನಲ್ಲಿ ಬರುತ್ತಿದ್ದ ಮದ್ಯದ ವಾಸನೆ ಆಕೆಗೆ ಅಸಹ್ಯಕರವಾಗಿತ್ತೆಂದೂ ಆ ಅಹಿತಕರ ಅನುಭವದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆಕೆಯ ಸುಪ್ತಚೇತನದ ಹಂಚಿಕೆಯ ಪ್ರಕಾರ ಅವಳು ತನ್ನ ಆಘ್ರಾಣಶಕ್ತಿ ಕಳೆದುಕೊಂಡಳೆಂದೂ ಆಮೇಲೆ ನಡೆಸಿದ ಅಧ್ಯಯನದಿಂದ ತಿಳಿದುಬಂತು (ಕೋಲ್ಮನ್). ಆದರೆ ಈ ಹಿಂದೆ ಸಾಮಾನ್ಯವಾಗಿ ಉನ್ಮಾದರೋಗದಲ್ಲಿ ಕಂಡುಬರುತ್ತಿದ್ದ ವೇದನಾ ಕ್ಷಮತೆಯ ರೋಗಲಕ್ಷಣಗಳು ಇಂದು ಕಡಿಮೆಯಾಗಿವೆಯೆಂಬುದು ವೇದ್ಯವಾಗಿದೆ. ಬಹುಶಃ ಇದಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯೇ ಕಾರಣವಾಗಿರಬಹುದು.

ದೇಹದ ವಿವಿಧ ಭಾಗಗಳಿಗೆ-ತೋಳು, ಕಾಲು, ಮುಖ ಅಥವಾ ಶಬ್ದಾಂಗಗಳಿಗೆ-ಕ್ರಿಯಾತ್ಮಕ (ಫಂಕ್ಷನಲ್) ಪಾಶರ್ವ್‌ವಾಯು ತಗಲಬಹುದು. ವೇದನಾಕ್ಷಮತೆಯಲ್ಲಿರುವಂತೆಯೇ ಇಲ್ಲೂ ಪಾಶರ್ವ್‌ವಾಯು ನರವಿಸ್ತರಣೆಗೆ ಅನುಗುಣವಾಗಿರದೆ, ಅಂಗಗಳನ್ನು ಅವಲಂಬಿಸಿರು ವುದು ಕಾಣುತ್ತದೆ. ಕೆಲವು ವೇಳೆ, ಪಾಶರ್ವ್‌ವಾಯು ಒಂದು ಅಂಗದ ಎಲ್ಲ ಕ್ರಿಯೆಗಳಿಗೂ ಸಂಬಂಧಿಸಿರದೆ ಕೇವಲ ಕೆಲವು ಕ್ರಿಯೆಗಳಿಗೆ ಸಂಬಂಧಿಸಿರಬಹುದು. ಒಂದು ಚಲನೆಗೆ ಒಂದು ಸ್ನಾಯು ಬೇಕಿರುವುದು ರೋಗಿಗೆ ಗೊತ್ತಿಲ್ಲವಾದರೆ, ಆಡಿಸಲಾಗದೆಂದು ರೋಗಿ ಹೇಳುತ್ತಿರುವ ಸ್ನಾಯು ಕೂಡ ಸರಿಯಾಗಿ ಇರುವುದೆಂದು ಕೆಲವು ಉಪಾಯಗಳಿಂದ ತೋರಿಸಬಹುದು. ಮೈಭಂಗಿ ಹುಚ್ಚಾ ಪಟ್ಟೆ ಸೊಟ್ಟನಾಗಿ ಇರಬಹುದು. ಕಣ್ಣು, ನಾಲಗೆಗಳನ್ನು ಸೊಟ್ಟವಾಗಿ ಇಟ್ಟುಕೊಳ್ಳಬಹುದು. ಕಾಲುಗಳ ನಡೆಯುವ ಕ್ರಿಯೆ ಸ್ತಬ್ಧವಾಗಿ, ನೃತ್ಯಮಾಡುವಾಗ ಸರಿಯಾಗಿರಬಹುದು. ಅದರಂತೆಯೇ ಕೈಯಿಂದ ಬರೆಯಲು ಆಗದಿದ್ದರೂ ಇತರ ಕೆಲಸ ಮಾಡಲು ಸಾಧ್ಯವಾಗಬಹುದು. ಯಾವುದೋ ಸುಪ್ತ ಅಭಿಪ್ರೇರಣೆಯಿಂದ ಪಾಶರ್ವ್‌ವಾಯು ಉಂಟಾದುದೆಂಬುದನ್ನು ಈ ಲಕ್ಷಣ ಸ್ಪಷ್ಟವಾಗಿ ಸೂಚಿಸುತ್ತದೆ. ಕೆಲವು ವೇಳೆ, ಆಕಸ್ಮಿಕಗಳು ರೋಗಿಗಳನ್ನು ಈ ವಿಕಾರಗಳಿಂದ ಉಳಿಸಬಹುದು. ಅನೇಕ ದಿನಗಳಿಂದ ಪಾಶರ್ವ್‌ವಾಯು ಪೀಡಿತನಾಗಿ ಬಿದ್ದಿದ್ದ ಒಬ್ಬ ರೋಗಿ ಬೆಂಕಿಯ ಅನಾಹುತದಿಂದ ಪಾರಾಗಲು ಎದ್ದು ಓಡಿದ. ಆ ಘಟನೆಯ ಅನಂತರ ಆತನ ಪಾಶರ್ವ್‌ವಾಯು ಮಾಯವಾಯಿತು. ಕ್ರಿಯಾತ್ಮಕ ಪಾಶರ್ವ್‌ವಾಯುವಿನೊಂದಿಗೆ, ಇಲ್ಲಿ ಹೆಸರಿಸಬಹುದಾದ ಇತರ ಕೆಲವು ಪ್ರಮುಖ ಚಾಲಕವಿಕೃತಿಗ ಳೆಂದರೆ-ಸ್ನಾಯುಸ್ಪಂದನ (ಟಿಕ್), ಕಂಪನ (ಟ್ರೆಮರ್), ಧ್ವನಿ ಹೊರಡದಿರುವುದು (ಎಫೋನಿಯ), ಉಗ್ಗು (ಸ್ಟಟರಿಂಗ್), ಮೂಕತನ (ಮ್ಯೂಟಿಸಂ) ಮತ್ತು ಮೂರ್ಛೆ (ಫೇóಂಟಿಂಗ್) ಕ್ಷೀಣಸ್ಪರದ ರೋಗಿಯ ದನಿ ಪಿಸುಮಾತಿಗೆ ಇಳಿಯಬಹುದು. ಕೊನೆಗೆ ಸದ್ದೇ ಬರದಂತಾಗಬಹುದು. ಇಷ್ಟಾದರೂ ಕೆಮ್ಮಿದರೆ ಎಂದಿನಂತೆ ಸದ್ದಾಗುತ್ತದೆ. ಬಹಳ ಸೆಟೆತುಕೊಂಡು ಪಾಶರ್ವ್‌ವಾಯು ಅನುಭವಿಸುತ್ತಲೇ ಇದ್ದರೆ, ಆ ಅಂಗ ಅಥವಾ ಅವಯವ ಪುಷ್ಟಿಗೆಟ್ಟು ಸಣ್ಣಗಾಗುವುದೂ ಕೀಲು ಕಟ್ಟುವುದೂ ಊದಿಕೊಳ್ಳುವುದೂ ಹೆಚ್ಚೇನಲ್ಲ. ಯುದ್ಧನಿರತ ಸೈನಿಕರಲ್ಲಿ ಕಂಡಂತೆ ನಡುಕವೂ ಜೋರಾಗಿರಬಹುದು. ರೋಗಿಯ ಗಮನವನ್ನು ಬೇರೆಡೆ ಸೆಳೆದರೆ ನಡುಕ ಕೆಲವೇಳೆ ನಿಲ್ಲುತ್ತದೆ.

ಉನ್ಮಾದದಲ್ಲಿ, ಸೆಳವುಗಳೂ (ಫಿಟ್ಸ್‌) ಸಾಮಾನ್ಯ. ಸುಮ್ಮನೆ ಕೊಂಚ ಮೈ ಮರೆತಂತೆ ಆಗುವುದರಿಂದ ಹಿಡಿದು, ಮಕ್ಕಳು ರಚ್ಚೆ ಹಿಡಿದಂತೆ ಆಡುವ ತನಕ ಎಲ್ಲ ಬಗೆಗಳನ್ನೂ ಕಾಣಬಹುದು. ರೋಗಿಯ ಹಾವಭಾವಗಳಿಂದಲೇ ಕೆಲವೇಳೆ ಕಾಮ ಕೆರಳಿರುವುದನ್ನು ಗುರುತಿಸಬಹುದು. ಕೆಲವೇಳೆ ನಿಜವಾದ ಮೊಲ್ಲಾಗರವನ್ನೇ (ಅಪಸ್ಮಾರ) ಹೋಲುವಷ್ಟು ಜೋರಾಗಿರಬಹುದು. ಸೆಳವು ವಿಪರೀತ ಆಗಿರುವ ಹೊತ್ತಿನಲ್ಲಿ ವಿದ್ಯುನ್ಮಿದುಳ ಚಿತ್ರ (ಎಲೆಕ್ಟ್ರೊಎನ್ಸೆಫೆಲೊಗ್ರಾಫ್) ತೆಗೆದು ನೋಡಿದರೂ ಯಾವ ಬದಲಾವಣೆಗಳೂ ಕಾಣುವುದಿಲ್ಲ. ನೋವು, ಸಿಟ್ಟು, ಚೋದನೆಗಳಿಂದ ಹಲವೇಳೆ ಸೆಳವು ಹುಟ್ಟಬಹುದು. ರೋಗಿಯ ಹಾವಭಾವ ಗಳಿಂದಲೇ ಕೆಲವೇಳೆ ಕಾಮ ಕೆರಳಿರುವುದನ್ನು ಗುರುತಿಸಬಹುದು. ಸೆಳವು ಎಷ್ಟೇ ಜೋರಾಗಿರಲಿ, ರೋಗಿ ತನಗೆ ಸ್ವಲ್ಪವೂ ಅಪಾಯವಾಗದಂತೆ ನೋಡಿಕೊಳ್ಳುವನು. ನಿದ್ದೆ ಮಾಡುವಾಗಲೂ ಒಂಟಿಯಾಗಿ ಇರುವಾಗಲೂ ಸೆಳವು ಬರುವುದಿಲ್ಲ. ಸೆಳವು ಕಾಡಿಸುವ ಹೊತ್ತೂ ಜೋರೂ ಸುತ್ತಲೂ ನೆರೆದಿರುವವರನ್ನು ಅವಲಂಬಿಸಿದೆ. ಸೆಳವಿನ ಅಲುಗಾಟವನ್ನು ತಡೆಯಲು ಕೈ ಹಾಕಿದಷ್ಟೂ ಒದರಾಟ, ಕೂಗಾಟ, ಮೈಬಿಗಿತ, ಏದುಸಿರು-ಇವು ಇನ್ನೂ ಹೆಚ್ಚುತ್ತಾ ಹೋಗುತ್ತವೆ. ಅದು ಕೊನೆಗೆ ಸರಕ್ಕನೆ ನಿಂತುಬಿಡಬಹುದು. ತಲೆಯಲ್ಲಿ ಆಣಿ ಹೊಡೆದ ನೋವು, ಗಂಟಲಲ್ಲಿ ವಸ್ತು ಸಿಕ್ಕಿಕೊಂಡಂತಹ ಅನುಭವ, ಕುರುಡುತನ, ಕಿವುಡುತನ, ಅರಿವಳಿಕೆ (ಅನೀಸ್ತೀಸಿಯ)-ಇವು ಅರಿವಿನ ಇಲ್ಲವೇ ಇಂದ್ರಿಯಗ್ರಾಹ್ಯವಾದ ಲಕ್ಷಣಗಳು. ಮೊದಲಿನವು ಎರಡೂ ಕಳವಳ ಇರುವ ಮನೋರೋಗಗಳಲ್ಲಿ ಸಾಮಾನ್ಯವಾದ್ದರಿಂದ ಇಲ್ಲಿ ಅಷ್ಟು ಮುಖ್ಯವಲ್ಲ. ಉನ್ಮಾದ ರೋಗಿ ನುಂಗಲು ಕಷ್ಟವೆಂದು ಹೇಳಿದರೆ ತಿನ್ನಲು ಇಷ್ಟವಿಲ್ಲದ್ದರ ಸೂಚನೆ. ರೋಗಿ ಕಂಡಿರುವ ಯಾವ ತೆರನ ಚರ್ಮದಲ್ಲಿ ಸ್ಪರ್ಶದ ತೊಂದರೆ ತೋರಬಹುದು. ಕೆಲವೆಡೆ ಮುಟ್ಟಿದರೆ, ಗಿಂಡಿದರೆ, ಸುಟ್ಟರೆ, ಸೂಜಿ ಚುಚ್ಚಿದರೂ ಗೊತ್ತಾಗದು. ಆದರೆ ವೈದ್ಯರಿಗೆ ಗೊತ್ತಾಗುವ ಯಾವ ನರದ ರೋಗವನ್ನೂ ಇದು ತೋರದು. ರೋಗಿಯ ಈ ಉನ್ಮಾದ ಲಕ್ಷಣವನ್ನು ಅನುಭವೀ ವೈದ್ಯ ಚೆನ್ನಾಗಿ ಪತ್ತೆ ಹಚ್ಚಬಲ್ಲ. ರೋಗ ನಟನೆ-ಸುಳ್ಳು ರೋಗಲಕ್ಷಣಕ್ಕೂ (ಮೆಲಿಂಗರಿಂಗ್) ಉನ್ಮಾದಕ್ಕೂ ಇರುವ ವ್ಯತ್ಯಾಸ ತಿಳಿಯಬೇಕು. ಮೆಲರಿಂಗ್ನಲ್ಲಿ ತಾನು ಮಾಡುತ್ತಿರುವ ಸೋಗಿನ ತಿಳಿವಳಿಕೆ ಚೆನ್ನಾಗಿರುತ್ತದೆ. ಉನ್ಮಾದ ರೋಗಿ ತೋರುವ ಕುರುಡುತನ, ಕಿವುಡುತನ ಮತ್ತಿತರ ತೋರಿಕೆಗಳ ಪರೀಕ್ಷೆಗಳನ್ನು ವೈದ್ಯನ ಹೆಚ್ಚಿನ ತಿಳಿವಳಿಕೆಯಿಂದ ಯೋಜಿಸಬೇಕು.

ಸಂವೇದನಾತ್ಮಕ ಲಕ್ಷಣಗಳು
ಮರವು
ಇದರಲ್ಲಿ ರೋಗಿ ತನ್ನ ಹೆಸರು, ಸಂಬಂಧಿಗಳು ಮತ್ತು ತನ್ನ ಹಿಂದಿನ ಜೀವನಘಟನೆಗಳು ಇವೆಲ್ಲವನ್ನೂ ಮರೆತು ಬಿಡುತ್ತಾನೆ. ಆದರೆ ಇಲ್ಲಿ ಸ್ಮೃತಿಲೋಪ ಪೂರ್ಣವಲ್ಲ. ರೋಗಿ ತನ್ನ ಪದಸಂಪತ್ತು, ಸಾಮಾಜಿಕ ನಡೆನುಡಿಗಳು, ತನಗೆ ಸಂಬಂಧಿಸಿರದ ವಿಷಯಗಳ ನೆನಪು-ಇವುಗಳನ್ನು ಹೊಂದಿರುತ್ತಾನೆ. ಹೀಗಾಗಿ, ಆತ ಆರೋಗ್ಯವಂತನಾಗಿದ್ದಾನೆಂಬ ಭಾವನೆ ಇತರರಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ಉನ್ಮಾದದ ಮರೆವು, ಯಾತನಾಮಯವಾದ ಹಾಗೂ ದುರದೃಷ್ಟಕರವಾದ ಪ್ರೇಮ ಪ್ರಸಂಗಗಳು, ಕೌಟುಂಬಿಕ ಕಲಹಗಳು, ಆರ್ಥಿಕ ಮುಗ್ಗಟ್ಟುಗಳು ಮುಂತಾದ ಸನ್ನಿವೇಶಗಳಿಂದ ಹೊರಹೊಮ್ಮುತ್ತವೆ. ವಿವಾಹಿತ ಮಹಿಳೆಯೊಬ್ಬಳು ವೈವಾಹಿಕ ಜೀವನದ ಅತೃಪ್ತಿಯಿಂದಲೂ ಮತ್ತೊಬ್ಬನಲ್ಲಿ ಆಕೆ ಇಟ್ಟಿದ್ದ ಪ್ರೀತಿಯಿಂದಲೂ ಮನೋಸಂಕ್ಷೋಭೆಗೆ ಒಳಗಾಗಿ ತನ್ನ ಸ್ಮೃತಿ ಕಳೆದುಕೊಂಡ ಸಂಗತಿಯೊಂದನ್ನು ಕಾನ್ಸಾರ್ ನಿರೂಪಿಸಿದ್ದಾನೆ.
ನಿದ್ರಾಸಂಚಾರ
ಹಲವು ವೇಳೆ ವಿಸ್ಮೃತಿ ವಿಕಾರಗಳು ಮೂಲವ್ಯಕ್ತಿತ್ವಕ್ಕೆ ಅರಿವಿಲ್ಲದಂತೆಯೇ ಸ್ವತಂತ್ರವಾಗಿ ಕಾರ್ಯಶೀಲವಾಗುವುದನ್ನು ನಿದ್ರಾಸಂಚಾರದಲ್ಲಿ ಕಾಣಬಹುದು. ಮೂಲ ವ್ಯಕ್ತಿತ್ವ ನಿಷ್ಕ್ರಿಯವಾಗಿ, ಈ ಎರಡನೆಯ ವ್ಯವಸ್ಥೆ ಜಾಗೃತವಾಗಿ, ಅನೇಕ ಕಾರ್ಯ ನಿರ್ವಹಿಸುತ್ತದೆ. ನಿದ್ರಾಸಂಚಾರಿ ಸಾಮಾನ್ಯವಾಗಿ, ತನ್ನ ಕಣ್ಣುಗಳನ್ನು ಅರೆತೆರೆದು ಅಥವಾ ಪೂರ್ಣವಾಗಿ ತೆರೆದು ನಡೆಯುತ್ತಿರುತ್ತಾನೆ. ಅಥವಾ ಇತರ ಕಾರ್ಯಗಳಲ್ಲಿ ತೊಡಗಿರುತ್ತಾನೆ. ನಿದ್ರೆ ಎಚ್ಚರಗಳ ನಡುವಣ ಮನಸ್ಥಿತಿ ಆತನಲ್ಲಿರುತ್ತದೆ, ನಿದ್ರಾಸಂಚಾರದ ಅವಧಿಯಲ್ಲಿ ತಾನು ಮಾಡಿದ ಕಾರ್ಯಗಳು ಎಚ್ಚರಗೊಂಡ ಅನಂತರ ಅವನ ನೆನಪಿನಲ್ಲಿರುವುದಿಲ್ಲ. ಯಾವಾಗಲೂ ಪೂರ್ಣಸಮವಸ್ತ್ರ ಧರಿಸಿ ಹಡಗಿನ ಅಟ್ಟದ ಮೇಲೆ ನಡೆಯುತ್ತಿದ್ದ ನಿದ್ರಾಸಂಚಾರಿ ನೌಕಾಧಿಕಾರಿಯೊಬ್ಬನ ಪ್ರಸಂಗವನ್ನು ರಾಸ್ ನಿರೂಪಿಸಿದ್ದಾನೆ.

ಮರೆವೆಚ್ಚರ (ಪಲಾಯನ ವಿಕೃತಿ-ಫ್ಯೂಗ್)
ಈ ರೋಗಪೀಡಿತ ವ್ಯಕ್ತಿ ಹಲವು ದಿನ ಅಥವಾ ತಿಂಗಳುಗಳ ಕಾಲ ತನ್ನತನವನ್ನು ಮರೆತು, ಹೊಸ ಹೆಸರನ್ನಿಟ್ಟುಕೊಂಡು ಮನೆಯಿಂದ ದೂರ ಎಲ್ಲಿಯೋ ಅಲೆಯುತ್ತಿರುತ್ತಾನೆ. ಆಗಂತುಕರೊಡನೆ ವಾಸಿಸುವುದರ ಜೊತೆಗೆ, ಆತ ತನ್ನ ಮೂಲಸ್ವಭಾವಕ್ಕೆ ವಿರುದ್ಧವಾದ ಅಭಿರುಚಿ ಬೆಳೆಸಿಕೊಳ್ಳುತ್ತಾನೆ. ಇದಕ್ಕೆ ಸೊಗಸಾದ ಉದಾಹರಣೆಯೆಂದರೆ, ಜೇಮ್ಸ್‌ ನಿರೂಪಿಸಿರುವ ರೆವರೆಂಡ್ ಎ. ಬಾರ್ನೆಯ ಪ್ರಸಂಗ. ಆತ ತನ್ನನ್ನು ಸಂಪೂರ್ಣ ಮರೆತು, ಎರಡು ತಿಂಗಳ ಕಾಲ, ಎ.ಜೆ. ಬ್ರೌನ್ ಎಂಬ ಹೆಸರಿನಿಂದ ಬೇರೆಲ್ಲೋ ವಾಸವಾಗಿದ್ದ. ಪಲಾಯನ ವಿಕೃತಿಯಿರುವ ರೋಗಿಗಳ ಮನಸ್ಸು ಗೊಂದಲಮಯವಾಗಿದ್ದು ಕೆಲವು ಸಲ ಅವರು ಅಪರಾಧಗಳನ್ನೂ ಮಾಡಬಹುದು

ದ್ವಿಮುಖ ವ್ಯಕ್ತಿತ್ವ
ಈ ಮನೋವಿಕಾರದಲ್ಲಿ ಎರಡು ವಿಧವಾದ ಪ್ರಜ್ಞಾಸ್ಥಿತಿಗಳು (ಮೂಲ ಮತ್ತು ಉತ್ತರ) ಒಂದೇ ವ್ಯಕ್ತಿಯಲ್ಲಿ ಮನೆಮಾಡಿಕೊಂಡಿರುತ್ತವೆ. ಅವು ಒಂದಾದ ಮೇಲೊಂದರಂತೆ ವ್ಯಕ್ತಿಯ ಜಾಗೃತ ಜೀವನವನ್ನು ನಿಯಂತ್ರಿಸುತ್ತವೆ. ಇವೆರಡು ಪ್ರಜ್ಞಾಸ್ಥಿತಿಗಳೂ ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೋಲುತ್ತವೆ. ಅನೇಕವೇಳೆ, ಇವೆರಡರಲ್ಲಿ ಪರಸ್ಪರ ವಿಸ್ಮೃತಿ ಇರುತ್ತದೆ. ಕೆಲವು ವೇಳೆ ಎರಡನೆಯ ವ್ಯಕ್ತಿತ್ವಕ್ಕೆ ಮೊದಲನೆಯದರ ಅನುಭವಗಳ ನೆನಪಿರಲು ಸಾಧ್ಯ. ಆದರೆ ಮೊದಲನೆಯ ವ್ಯಕ್ತಿತ್ವಕ್ಕೆ ಎರಡನೆಯದರ ಅಸ್ತಿತ್ವವೇ ತಿಳಿದಿರುವುದಿಲ್ಲ. ಆರ್.ಎಲ್. ಸ್ಟೀವನ್ಸನ್ನ ಡಾಕ್ಟರ್ ಜಕಿಲ್ ಅಂಡ್ ಮಿಸ್ಟರ್ ಹೈಡ್ ಕಾದಂಬರಿ ದ್ವಿಮುಖ ವ್ಯಕ್ತಿತ್ವದ ಲಕ್ಷಣಗಳನ್ನು ಸೊಗಸಾಗಿ ನಿರೂಪಿಸುತ್ತದೆ. ಈ ಮನೋವಿಕಾರಕ್ಕೆ ಸೂಕ್ತವಾದ ವೈದ್ಯಕೀಯ ಉದಾಹರಣೆಯೆಂದರೆ, ಗಾಡರ್ಡ್ ನಿರೂಪಿಸಿರುವ ನಾರ್ಮ-ಪಾಲಿಯ ಸಂಗತಿ. ಇದು ಒಬ್ಬ ಹುಡುಗಿಯಲ್ಲಿ ವ್ಯಕ್ತವಾಗುತ್ತಿದ್ದ ಎರಡು ಪರಸ್ಪರ ವಿರುದ್ಧ ಪ್ರಜ್ಞಾಸ್ಥಿತಿಗಳಿಗೆ ಸಂಬಂಧಿಸಿದ್ದು. ಮೂಲ ವ್ಯಕ್ತಿತ್ವವಾದ ನಾರ್ಮಳಲ್ಲಿ ಸಂಯಮ, ವಿನಯಶೀಲತೆ, ತೀಕ್ಷ್ಣಬುದ್ಧಿ-ಇವು ಪ್ರಮುಖ ಲಕ್ಷಣಗಳಾಗಿದ್ದರೆ, ಎರಡನೆಯ ವ್ಯಕ್ತಿತ್ವವಾದ ಪಾಲಿಯಲ್ಲಿ ತುಂಟತನ ಮತ್ತು ಸ್ವೇಚ್ಛಾಚಾರ ಪ್ರಮುಖ ಲಕ್ಷಣಗಳಾಗಿದ್ದವು. ಶ್ರೀಮತಿ ಆರ್ಯಾಂಬ ಪಟ್ಟಾಭಿ ಅವರ ಎರಡು ಮುಖ ಕಾದಂಬರಿ/ಯಲ್ಲಿ ಈ ದ್ವಿಮುಖ ವ್ಯಕ್ತಿತ್ವವನ್ನು ಚಿತ್ರಿಸಲಾಗಿದೆ.

ಬಹುಮುಖ ವ್ಯಕ್ತಿತ್ವ
ಇದು ನಿಜವಾಗಿಯೂ ದಿಗ್ಭ್ರಮೆ ಹಿಡಿಸುವಂಥ ಮನೋವಿಕಾರ. ಒಂದೇ ವ್ಯಕ್ತಿಯಲ್ಲಿ ಪರಸ್ಪರ ವಿಭಿನ್ನವಾದ ಹಲವು ವ್ಯಕ್ತಿತ್ವಗಳು ಪ್ರಕಟವಾಗುತ್ತವೆ. ಮೂರು ಅಥವಾ ಅದಕ್ಕೂ ಹೆಚ್ಚು ಪ್ರಜ್ಞಾವಸ್ಥೆಗಳು ಯಾವುದೋ ಒಂದು ನಿಯಮದ ಪ್ರಕಾರ ಒಂದಾದ ಮೇಲೊಂದರಂತೆ ವ್ಯಕ್ತಿಯ ಜಾಗೃತ ಜೀವನದ ಮೇಲೆ ಅಧಿಕಾರ ನಡೆಸುತ್ತವೆ ಎಂಬುದು ಸೋಜಿಗವೆನಿಸಿದರೂ ಸತ್ಯಸಂಗತಿ. ಮಾರ್ಟನ್ ಪ್ರಿನ್ಸ್‌ ವಿವರಿಸಿರುವ ಬ್ಯೂಚ್ಯಾಂಪಳ ಪ್ರಸಂಗದಲ್ಲಿ ಮೂರು ವ್ಯಕ್ತಿತ್ವಗಳ--ಸಂನ್ಯಾಸಿನಿ, ಹೆಂಗಸು, ದೆವ್ವ-ವಿವರವಾದ ನಿರೂಪಣೆ ಬರುತ್ತದೆ. ಮೂಲವ್ಯಕ್ತಿತ್ವ ಸಂನ್ಯಾಸಿನಿಯದು. ಈಕೆ ಆದರ್ಶಪ್ರಾಯಳಾದ ಪ್ರಜ್ಞಾಶೀಲೆ, ಆದರೆ ಸ್ವಲ್ಪ ನೊಂದಂತಿದ್ದ ಮಹಿಳೆ. ಎರಡನೆಯ ವ್ಯಕ್ತಿತ್ವ ಹೆಂಗಸಿನದು. ಈಕೆ ಕೋಪೋದ್ರೇಕ ಗಳಿಂದ ಕೂಡಿ, ಸ್ವಾರ್ಥ ಮತ್ತು ಅತಿಯಾಸೆ ಹೊಂದಿದ್ದ ಒಬ್ಬ ಸಾಮಾನ್ಯೆ. ಮೂರನೆಯ ವ್ಯಕ್ತಿತ್ವ ದೆವ್ವದ್ದು. ಇದಕ್ಕೆ ಸ್ಯಾಲಿ ಎಂಬ ಹೆಸರೂ ಇತ್ತು. ಅದು ಅನೀತಿಯಿಂದ ಕೂಡಿ, ಇತರ ಎರಡು ವ್ಯಕ್ತಿತ್ವಗಳ ಮೇಲೆ ತಂತ್ರ ಹೂಡುತ್ತಿದ್ದ ಪಿಶಾಚಿ. ಈ ಮನೋವಿಕಾರಕ್ಕೆ ಮತ್ತೊಂದು ಅತ್ಯಾಕರ್ಷಕ ಉದಾಹರಣೆಯೆಂದರೆ, ತೈಗ್ಪೆನ್ ಮತ್ತು ಕ್ಲೆಕ್ಲೆ ನಿರೂಪಿಸಿರುವ ಇವಳ ನಾಲ್ಕು ಮುಖಗಳು ಎಂಬ ಸಂಗತಿ. ಇದರಲ್ಲಿ ಮೂಲ ವ್ಯಕ್ತಿತ್ವ ಈವ್ ವೈಟ್. ಎರಡನೆಯ ಮತ್ತು ಮೂರನೆಯ ವ್ಯಕ್ತಿತ್ವಗಳು ಕ್ರಮವಾಗಿ ಈವ್ಬ್ಲಾಕ್ ಮತ್ತು ಜೇನ್. ನಾಲ್ಕನೆಯ ವ್ಯಕ್ತಿತ್ವ ನಿರಂತರ ಚಿಕಿತ್ಸೆಯಿಂದ ಹೆಚ್ಚು ಪಕ್ವವಾಗಿ ಹೊರಬಂದ ಈವ್ಲಿನ್. ಈ ಪ್ರಸಂಗ ಚಲನಚಿತ್ರದ ರೂಪದಲ್ಲೂ ಪ್ರಕಟವಾಗಿದೆ. ಏನೇ ಇರಲಿ ಇದು ಅಪರೂಪದ ಉನ್ಮಾದ.

ತೋರಿಕೆಯ ಮನೋರೋಗದ ಲಕ್ಷಣಗಳು
ಮಂಪರು (ಸ್ಟೂಪರ್), ಅರೆತಿಳಿವು (ಟ್ವೈಲೈಟ್ ಸ್ಟೇಟ್), ಹುಸಿ ಹುಚ್ಚು (ಸೂಡೊಡಿಮೆನ್ಷಿಯ), ಮರೆವೆಚ್ಚರ (ಫ್ಯೂಗ್)-ಇವೇ ತೋರಿಕೆಯ ಮನೋರೋಗ ಲಕ್ಷಣಗಳು. ಯುದ್ಧದಲ್ಲಿ ಹೊಡೆದು ಬಡಿದು ಕಾದಾಡಿ ಸುಸ್ತಾದ ಸೈನಿಕನಲ್ಲಿ ಮಂಪರು ಕಂಡಾಗ, ಮಲಮೂತ್ರಗಳು ಹೋಗುವುದೇ ಗೊತ್ತಾಗದೆ ಬಿದ್ದಿರಬಹುದು, ಎಳೆಗೂಸಿನಂತೆ ಊಟಮಾಡಬಹುದು. ಅಂಥವನನ್ನು ಯುದ್ಧರಂಗದಿಂದ ಹಿಂದಕ್ಕೆ ಕರೆಸಿಕೊಂಡರೆ ಬೇಗ ಸರಿಯಾಗಬಹುದು. ಆದರೆ, ಹೀಗೆ ಸುಸ್ತು ಬಿದ್ದವರನ್ನೆಲ್ಲ ಉನ್ಮಾದಿಗಳು ಎನ್ನುವಂತಿಲ್ಲ. ಸೆಳವಿನೊಂದಿಗೆ ಭ್ರಾಂತಿಯೂ (ಕನ್ಫ್ಯೂಷನ್) ಸನ್ನಿಯೂ (ಡಿಲೀರಿಯಂ) ಕಾಣಬಹುದು. ಇಲ್ಲವೇ ಭಾವೋದ್ವೇಗದ ಅನುಭವ ಆಗಿರಲೂಬಹುದು. ಕೆಲವೇಳೆ ಇದು ನಾಟಕೀಯವಾಗಿ ಪೂಜೆ ಪುನಸ್ಕಾರಗಳಲ್ಲಿ ತೋರ್ಪಡಬಹುದು. ರೋಗಿ ತಾನೊಂದು ಪ್ರಾಣಿಯೋ ಎಳೆಗೂಸೋ ಆಗಿರುವಂತೆ ನಡೆದುಕೊಳ್ಳಬಹುದು. ಹಲವೇಳೆ, ರಾತ್ರಿಹೊತ್ತಿನ ನಿದ್ರಾಸಂಚಾರದಲ್ಲಿ ಹಿಂದೆಂದೋ ಆದದ್ದನ್ನೋ ತೊಡಕಿನ ಕೆಲಸವನ್ನೋ ಮಾಡಬಹುದು. ಉನ್ಮಾದದ ಮರೆವೆಚ್ಚರದ ಹಾಗೇ ಇದೂ ಇರುತ್ತದೆ. ಎಚ್ಚರ ಇಲ್ಲಿ ತಗ್ಗದೆ ಕಿರಿದಾಗುವುದು. ಮರೆವೆಚ್ಚರದಲ್ಲಿ, ವ್ಯಕ್ತಿ ಒಂದು ಗೊತ್ತಾದ ತೇದಿಯ ಹಿಂದಿನದೆಲ್ಲವೋ ಕೆಲವೋ ನೆನಪಿಗೆ ಬಾರವು ಎನ್ನುತ್ತಾನೆ. ಆಮೇಲೆ, ಮರೆವೆಚ್ಚರದ ಹೊತ್ತಿನಲ್ಲಿ ಏನಾಯಿತೋ ಗೊತ್ತಿಲ್ಲ ಎನ್ನುವನು. ಅಂತೂ ಅವನಿಗೆ ಒಂದಾದ ಮೇಲೆ ಒಂದು ತೋರುವ ಎರಡು ಬಗೆಯ ನೆನಪುಗಳಿರುತ್ತವೆ. ಮರೆವಿನಲ್ಲಿ ತನ್ನ ಗುರುತನ್ನೂ ಮರೆಯುವುದರಿಂದ ಅವನಿಗೆ ಎರಡು (ಕೆಲವೇಳೆ, ಮೂರೋ ನಾಲ್ಕೋ) ವ್ಯಕ್ತಿತ್ವಗಳು ಇರುತ್ತವೆ ಎನ್ನಬಹುದು. ನಿಜವಾಗಿ, ಇವೆಲ್ಲ ಒಂದೇ ವ್ಯಕ್ತಿತ್ವದ ಬೇರೆ ಬೇರೆ ಮೊಗಗಳೇ ಹೊರತು ಬೇರೆ ಬೇರೆ ವ್ಯಕ್ತಿತ್ವಗಳಲ್ಲ. ಮರೆವೆಚ್ಚರದಲ್ಲಿ ಇರುವಾಗ ತಾನು ಯಾರು, ಎಲ್ಲಿನವನೆಂದೇ ರೋಗಿಗೆ ಗೊತ್ತಿರುವುದಿಲ್ಲ. ನೆನಪನ್ನು ಮರೆಯಲ್ಲಿರಿಸುವ ನೆನೆಮರೆವು (ಆ್ಯಮ್ನೀಸಿಯ) ಜೋರಾಗಿ, ಮರೆವೆಚ್ಚರಕ್ಕೆ ಕಾರಣ, ಯಾವುದೋ ಪೀಕಲಾಟವನ್ನು ತಪ್ಪಿಸಿಕೊಳ್ಳುವ ಉಪಾಯವೇ. ಅಂಥ ರೋಗಿ ಏನೋ ಮಾಡಬಾರದ್ದನ್ನು ಮಾಡಿರುವನು. ಮರೆವೂ ರೋಗಿ ಹೇಳಿಕೊಳ್ಳುವಷ್ಟು ಪುರ್ತಿಯಾಗಿರದು. ಮಿದುಳು, ನರಗಳ ರೋಗಗಳಲ್ಲೂ ಮರೆವೆಚ್ಚರ ಕಾಣಬರುತ್ತದೆ. ಆದ್ದರಿಂದ, ಮರೆವೆಚ್ಚರ ಯಾವಾಗಲೂ ಉನ್ಮಾದದಿಂದಲೇ ಆಗಬೇಕಿಲ್ಲ.

ಹುಸಿಹುಚ್ಚಿನಲ್ಲಿ ರೋಗಿ ಹುಚ್ಚನಂತೆ ವರ್ತಿಸುವನು. ವಿಚಾರಣೆಗಾಗಿ ಕಾದಿರುವ ಬಂದಿಯಲ್ಲಿ ಇದನ್ನು ಕಾಣಬಹುದು. ಏನಾದರೂ ವಿರಸ ಸಂದರ್ಭದಿಂದ ತಪ್ಪಿಸಿಕೊಳ್ಳುವುದೇ ಇದರ ನೆಪ. ಈ ಉನ್ಮಾದ ಕಾಣಿಸಿಕೊಳ್ಳುವುದು ಮನೋರೋಗಕ್ಕೆ ಈಡಾಗುವಂತೆ ಇರುವವರಲ್ಲಿ ಮಾತ್ರ. ಕೆಲವೇಳೆ ಮಿದುಳಿಗೆ ಪೆಟ್ಟಾದಾಗಲೂ ಇದು ತೋರಬಹುದು. ರೋಗಿಯ ವರ್ತನೆ ಪುರ್ತಿಯಾಗಿ ಹುಚ್ಚಿನ ವಿಚಾರವಾಗಿ ತನಗಿರುವ ತಿಳಿವಳಿಕೆಯಂತೆ ಇರುವುದೇ ಹೊರತು, ವೈದ್ಯನಿಗೆ ತಿಳಿದಿರುವ ನಿಜವಾದ ಹುಚ್ಚಿನ ಲಕ್ಷಣಗಳೇ ಕಾಣವು. ಕೆಲವೇಳೆ ರೋಗಿಯ ವರ್ತನೆ ತಮಾಷೆಯಾಗಿರುತ್ತದೆ. ತನ್ನ ವಯಸ್ಸು ಗೊತ್ತಿಲ್ಲ ಎನ್ನುವನು. ಸರಳ ಟೀಕೆಗಳೂ ಅರ್ಥವಾಗದೆಂಬಂತೆ ಇದ್ದು, ಹುಚ್ಚುಹುಚ್ಚು ಉತ್ತರ ಕೊಡುವುದರಲ್ಲೇ ಅವನಿಗೆ ಅರ್ಥ ಆಗಿರುವುದನ್ನು ಗುರುತಿಸಬಹುದು. ಸಾಮಾನ್ಯ ವಿಚಾರವನ್ನು ಕೇಳಿದರೂ ಏನೋ ಬಲು ತಿಣುಕಿ ಕಷ್ಟಪಟ್ಟು ನೆನಪಿಸಿಕೊಳ್ಳುವಂತೆ ಆಡುವನು. ಇಚ್ಛಿತ್ತದಲ್ಲಿ ಹೀಗಲ್ಲ. ಅಂತೂ ಮುಖ್ಯವಾಗಿ ತನ್ನಿಂದ ಏನೂ ಆಗದೆಂಬ ಆತನ ಹೇಳಿಕೆಗೂ ವರ್ತನೆಗೂ ಹೊಂದಾಣಿಕೆ ಇರುವುದಿಲ್ಲ.

ಉಗಮ
ಹಲವು ಉನ್ಮಾದರೋಗ ಲಕ್ಷಣಗಳು, ದೈಹಿಕ ವಿಕೃತಿಗಳಲ್ಲಿ ವ್ಯಕ್ತವಾದರೂ ಅವುಗಳಿಗೆ ಜೈವಿಕ ಆಧಾರವಿರುವುದಿಲ್ಲ. ಇದರಿಂದಾಗಿ, ಎಲ್ಲ ವಿಧವಾದ ಉನ್ಮಾದರೋಗಲಕ್ಷಣ ಗಳೂ ಕ್ರಿಯಾಜನ್ಯ ಮನೋವಿಕಾರಗಳು ಎಂದು ಹೇಳುವುದುಂಟು. ಅವು ಕ್ರಿಯಾಜನ್ಯವಾದು ವೆಂಬುದನ್ನು ಸಂಮೋಹನೆಯ ವಿಧಾನದಿಂದ ತೋರಿಸಿಕೊಡಲು ಸಾಧ್ಯ. ಮೊದಲನೆಯ ದಾಗಿ, ಈ ರೋಗಲಕ್ಷಣಗಳನ್ನು ಮನೋಸೂಚನೆ ಕೊಟ್ಟು ಉಂಟುಮಾಡಬಹುದು. ರೋಗಿಗೆ, ‘ನೀನು ಪಾಶರ್ವ್‌ವಾಯುಪೀಡಿತನಾಗುತ್ತೀಯೆ’ ಎಂದು ಕೇವಲ ಭಾವಪ್ರೇರಣೆ ಕೊಟ್ಟಾಗ, ಆ ರೋಗಲಕ್ಷಣ ತತ್ಕ್ಷಣ ಪ್ರಕಟವಾಗುವುದನ್ನು ಕಾಣಬಹುದು. ಎರಡನೆಯದಾಗಿ ಈ ರೋಗಲಕ್ಷಣಗಳು ಮನೋಸೂಚನೆಯಿಂದ, ಭಾವಪ್ರೇರಣೆಯಿಂದ ಮಾಯವಾಗ ಬಹುದು. ಕುರುಡನಾಗಿದ್ದವನು ದೃಷ್ಟಿಪಡೆಯಬಹುದು. ಪಾಶರ್ವ್‌ವಾಯುಪೀಡಿತ ನಡೆಯ ಬಹುದು. ಹೀಗೆ ಉನ್ಮಾದ ರೋಗ ಕ್ರಿಯಾಜನ್ಯವಾದ್ದರಿಂದ ಅದನ್ನು ವಿವರಿಸಲು ಕೆಲವು ಸಿದ್ಧಾಂತಗಳನ್ನು ಪರಿಣತರು ಮುಂದಿಟ್ಟಿದ್ದಾರೆ. ಜೇಮ್ಸ್‌ ಬ್ರಾಯ್ಡ್‌ ಮೊದಲಾದವರು ಭಾವಪ್ರೇರಣೆಯೇ ಈ ರೋಗದ ಮೂಲವೆಂಬುದಾಗಿ ಪ್ರತಿಪಾದಿಸಿದ್ದಾರೆ. ಈ ಭಾವಪ್ರೇರಣೆ ಪರರಿಂದ ಬಂದದ್ದಾಗಿರಬಹುದು ಅಥವಾ ವ್ಯಕ್ತಿಯಲ್ಲೇ ಉದ್ಭವಿಸಿದ್ದಾಗಿರಬಹುದು. ಪಿಯಾರೆಯಾನೆ ವಿಸಂಯೋಜನಾ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಇದರ ಪ್ರಕಾರ, ವ್ಯಕ್ತಿಯಲ್ಲಿ ಮಾನಸಿಕ ಘರ್ಷಣೆ ಇದ್ದಾಗ, ಕೆಲವು ಜಟಿಲ ಹಾಗೂ ತ್ರಾಸದಾಯಕ ಕ್ರಿಯೆಗಳನ್ನು ನೆರವೇರಿಸುವ ಕಾರ್ಯದಲ್ಲಿ ಪ್ರಬುದ್ಧ ಚೇತನ ವಿಫಲವಾಗಬಹುದು. ಆಗ, ಆ ಕ್ರಿಯೆಗಳು ಮೂಲ ವ್ಯಕ್ತಿತ್ವದಿಂದ ವಿಸಂಯೋಜನೆ ಹೊಂದಿ, ಸ್ವತಂತ್ರವಾಗಿ ವರ್ತಿಸಲು ಪ್ರಾರಂಭಿಸಿ ಉನ್ಮಾದರೋಗದ ದೈಹಿಕ ಮತ್ತು ಮಾನಸಿಕ ಲಕ್ಷಣಗಳಾಗಿ ವ್ಯಕ್ತವಾಗುತ್ತವೆ. ಹೀಗೆ ಉಂಟಾದ ವಿಸಂಯೋಜಿತ ವ್ಯವಸ್ಥೆಗಳೂ ಮನೋವ್ಯಾಪಾರಗಳೂ ಕ್ರಿಯಾಶೀಲವಾ ಗಿದ್ದು ವ್ಯಕ್ತಿಯ ಪ್ರಬುದ್ಧ ಚೇತನದ ಜೊತೆಯಲ್ಲಿ ಇರುತ್ತವೆ ಎಂಬುದು ಮಾರ್ಟನ್ ಪ್ರಿನ್ಸನ ಅಭಿಮತ. ಆದರೆ ಉಳಿದವರು ಇದನ್ನು ಒಪ್ಪುವುದಿಲ್ಲ; ಅವು ಸುಪ್ತಾವಸ್ಥೆಯಲ್ಲಿ ಇರುತ್ತವೆ ಎಂದು ಇವರು ಪ್ರತಿಪಾದಿಸಿದ್ದಾರೆ. ಈ ರೋಗದ ಉಗಮವನ್ನು ವಿವರಿಸಲು ಸಿಗ್ಮಂಡ್ ಫ್ರಾಯ್ಡ್‌ ತನ್ನ ನಿರೋಧ ಸಿದ್ಧಾಂತವನ್ನು ಮುಂದಿಟ್ಟ. ಅದರ ಪ್ರಕಾರ ವಾಸ್ತವ ಜೀವನದಲ್ಲಿ ನಿರಾಶೆಗೆ (ಫ್ರಸ್ಟ್ರೇಷನ್) ಒಳಗಾದ ವಾಂಛೆಗಳು ದಮನಸ್ಥಿತಿಗೊಳಗಾಗಿ ಸುಪ್ತಚೇತನ ಸೇರುತ್ತವೆ. ಅಲ್ಲಿದ್ದುಕೊಂಡು, ಅವಕಾಶ ದೊರೆತಾಗ, ಅವು ಉನ್ಮಾದ ರೋಗ ಲಕ್ಷಣಗಳಾಗಿ ಮತ್ತು ಕನಸುಗಳ ರೂಪದಲ್ಲಿ ವ್ಯಕ್ತವಾಗಿ, ತೃಪ್ತಿ ಪಡೆಯಲು ಯತ್ನಿಸುತ್ತವೆ. ಇದರಲ್ಲಿ ಕಾಮವಾಂಛೆಯೇ ಮೂಲಭೂತವಾದದ್ದೆಂಬುದು ಫ್ರಾಯ್ಡನ ಅಭಿಮತ.

ಉನ್ಮಾದ ರೋಗದ ಉಗಮಕ್ಕೆ ಮಾನಸಿಕ ತುಮುಲಗಳು ನಿರಾಶೆಗಳು ಫಲವತ್ತಾದ ನೆಲ ಒದಗಿಸುತ್ತವೆಂಬ ಅಭಿಪ್ರಾಯವೂ ಇದೆ. ತುಮುಲಗಳಿಂದ ಉಂಟಾದ ಮಾನಸಿಕ ಘರ್ಷಣೆಯಿಂದಾಗಿ (ಟೆನ್ಷನ್) ಅನೇಕ ಇಚ್ಛೆಗಳು ಭಂಗಹೊಂದಿ ದಮನಕ್ಕೊಳಗಾಗುತ್ತವೆ. ಅವಕಾಶ ದೊರೆತಾಗ ರೋಗಲಕ್ಷಣ ರೂಪದಲ್ಲಿ ಹೊರಹೊಮ್ಮುತ್ತವೆ. ಅಲ್ಲದೆ ಮಾನಸಿಕ ತುಮುಲಗಳ ದೆಸೆಯಿಂದಾಗಿ ವ್ಯಕ್ತಿತ್ವವನ್ನು ಪೂರ್ಣವಾಗಿ ನಿಯಂತ್ರಿಸಲು ಪ್ರಬುದ್ಧ ಚೇತನ ಅಶಕ್ತವಾದಾಗ ಕೆಲವು ಮನೋವ್ಯಾಪಾರಗಳು ಮೂಲವ್ಯಕ್ತಿತ್ವದಿಂದ ಪ್ರತ್ಯೇಕಗೊಂಡು, ಸ್ವತಂತ್ರವಾಗಿ ವ್ಯವಹರಿಸಲು ಪ್ರಾರಂಭಿಸಿದಾಗ ಈ ರೋಗಲಕ್ಷಣಗಳು ಉಂಟಾಗುತ್ತವೆ. ಪರಿವರ್ತನ ಉನ್ಮಾದ ರೋಗದಲ್ಲಿ ಬಹುಮುಖ್ಯವಾಗಿ ಜಟಿಲವಾದ ಹಾಗೂ ತ್ರಾಸದಾಯಕ ವಾದ ಜೀವನ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ಸುಪ್ತ ಇಚ್ಛೆಯೇ ರೂಪಾಂತರ ಹೊಂದಿ ಒಂದಲ್ಲ ಒಂದು ವಿಧವಾದ ದೈಹಿಕ ಕ್ರಿಯಾ ವಿಕೃತಿಯಲ್ಲಿ ಪ್ರಕಟವಾಗುತ್ತದೆ. ಈ ರೋಗ ಬೆಳೆವಣಿಗೆಯ ಘಟನಾಸರಣಿಯನ್ನು ವಿಶ್ಲೇಷಿಸಿ ಕೋಲ್ಮನ್ ಈ ಕೆಳಗಿನ ಅಂಶಗಳನ್ನು ನಿರೂಪಿಸಿದ್ದಾನೆ: 1. ರೋಗಿಗೆ ಯಾವುದೋ ಒಂದು ಅಹಿತ ಸಂದರ್ಭದಿಂದ ತಪ್ಪಿಸಿಕೊಳ್ಳುವ ಇಚ್ಛೆ ಇರುತ್ತದೆ. 2. ಆ ಸನ್ನಿವೇಶದಿಂದ ತಪ್ಪಿಸಿಕೊಳ್ಳಬೇಕೆಂಬ ಇಚ್ಛೆ ಯೋಗ್ಯ ಹಾಗೂ ಸಾಧ್ಯವಾದದ್ದಲ್ಲವೆಂಬ ಪ್ರಜ್ಞೆಯಿಂದಾಗಿ, ಅದು ನಿರೋಧಿತವಾಗುತ್ತದೆ. 3. ಜೀವನದಲ್ಲಿ ಪ್ರಯಾಸಕರವಾದ ಸ್ಥಿತಿಗತಿಗಳು ಮುಂದುವರಿದಾಗ, ನಿರೋಧಿತವಾಗಿರುವ ಮೂಲ ಇಚ್ಛೆಗಳು ರೋಗಲಕ್ಷಣಗಳಾಗಿ ಹೊರಹೊಮ್ಮುತ್ತವೆ. ಹೀಗಿರುವುದರಿಂದ ರೋಗಿಯ ರೋಗಲಕ್ಷಣ ಆತನ ಹಿಂದಿನ ಕಾಯಿಲೆಗೆ ಸಂಬಂಧಿಸಿರುತ್ತದೆ ಅಥವಾ ಇತರರಲ್ಲಿ ಕಂಡ ಕಾಯಿಲೆ ಲಕ್ಷಣಗಳ ಅನುಕರಣವಾಗಿರುತ್ತವೆ.

ಉನ್ಮಾದ ರೋಗ ಮತ್ತು ರೋಗನಟನೆಗಳ ಮನೋವಿಕಾರಗಳ ಅಭಿಪ್ರೇರಣೆಗಳೂ ರೋಗಲಕ್ಷಣಗಳೂ ಹೆಚ್ಚುಕಡಿಮೆ ಒಂದೇ ಆಗಿದ್ದರೂ ಅವುಗಳಲ್ಲಿ ಭೇದವಿದೆ. ಜೀವನದ ಹೊಣೆಯಿಂದ ತಪ್ಪಿಸಿಕೊಳ್ಳಬೇಕೆಂಬ ತನ್ನ ಬಯಕೆಯ ಅರಿವು ಅಸ್ಪಷ್ಟವಾಗಿದ್ದರೂ ಆ ಬಯಕೆಯೇ ತನ್ನ ರೋಗಲಕ್ಷಣದ ಮೂಲವೆಂಬುದು ಉನ್ಮಾದ ರೋಗಿಗೆ ತಿಳಿದಿರುವುದಿಲ್ಲ. ಆದರೆ ರೋಗನಟಿಸುವಾತ ಪ್ರಜ್ಞಾಪೂರ್ವಕವಾಗಿ ರೋಗ ಲಕ್ಷಣವನ್ನು ಉದ್ದೀಪನಗೊಳಿಸಿ ಕೊಳ್ಳುತ್ತಾನೆ. ಉದಾಹರಣೆಗೆ ಅಹಿತಕರವಾದ ಜೀವನ ಹೊಣೆಯಿಂದ ತಪ್ಪಿಸಿಕೊಳ್ಳಲು ಪ್ರಜ್ಞಾಪೂರ್ವಕವಾಗಿ ಪಾಶರ್ವ್‌ವಾಯು ಪೀಡಿತನಾಗಬಹುದು.

ಉನ್ಮಾದರೋಗಿಗಳ ವ್ಯಕ್ತಿತ್ವ
ಉನ್ಮಾದ ರೋಗಲಕ್ಷಣಗಳ ಸ್ವಭಾವವನ್ನೂ ಅವುಗಳ ಹಿನ್ನೆಲೆಯಲ್ಲಿ ಕಂಡುಬರುವ ಸರಳವಾದ ತಂತ್ರಗಳನ್ನೂ ಗಮನಿಸಿದಾಗ, ಉನ್ಮಾದರೋಗಿಗಳ ಸ್ವಭಾವ ಮಕ್ಕಳ ಸ್ವಭಾವಕ್ಕೆ ಅನುಗುಣವಾಗಿರುವುದು ಕಂಡುಬರುತ್ತದೆ. ಪ್ರಥಮತಃ ಅವರು ಅಸ್ಥಿರವಾದ ಜಿತಪ್ರಕೃತಿಯಿಂದ ಕೂಡಿರುತ್ತಾರೆ. ಅವರ ಭಾವನೆಗಳು ಸುಲಭವಾಗಿ ನೋವಿಗೆ ಒಳಗಾಗುತ್ತವೆ. ಆದ್ದರಿಂದ ಅವರು ತಮ್ಮ ಪ್ರಿಯಜನರ ಸಹಾನುಭೂತಿ ಮತ್ತು ಗಮನಗಳಿಗೆ ಹಂಬಲಿಸುತ್ತಾರೆ. ಉನ್ಮಾದಾತ್ಮಕ ನಗು ಮತ್ತು ಆಳು ಇವು ಸ್ಪಷ್ಟ ದೃಷ್ಟಾಂತಗಳು. ಅವರದು ಅಪಕ್ವ ವ್ಯಕ್ತಿತ್ವ. ಯಾವಾಗಲೂ ಆವೇಗಪರರಾಗಿ, ಅಸಮಂಜಸವರ್ತನೆಯಿಂದ ಕೂಡಿರುತ್ತಾರೆ. ಅವರಲ್ಲಿ ಭಾವಪ್ರೇರಣಾಪ್ರವಣತೆ ಅತ್ಯಂತ ಪ್ರಬಲವಾಗಿರುತ್ತದೆ. ಕೇವಲ ಭಾವಪ್ರೇರಣೆ ಯಿಂದಲೇ ಅವರಲ್ಲಿ ಹಲವು ರೋಗಲಕ್ಷಣಗಳನ್ನು ಉಂಟು ಮಾಡಬಹುದೆಂಬುದು ಸಂಮೋಹನ ವಿಧಾನದಿಂದ ಸಿದ್ಧವಾಗಿದೆ. ಅಲ್ಲದೆ ಕೆಲವು ವೇಳೆ ಉಂಟಾಗುವ ಸಾಮೂಹಿಕ ಉನ್ಮಾದ ಕೂಡ ಭಾವಪ್ರೇರಣೆಯಿಂದಲೇ ಉಂಟಾಗುತ್ತದೆ ಎಂಬುದು ಪರಿಣತರ ಅಭಿಮತ. ಉನ್ಮಾದ ರೋಗಿ ಸಾಮಾನ್ಯವಾಗಿ ಪರಾವಲಂಬನ ಮನೋಭಾವದಿಂದ ಕೂಡಿರುತ್ತಾನಲ್ಲದೆ ತನ್ನ ಸ್ವಾರ್ಥಕ್ಕಾಗಿ ಇತರರನ್ನು ಕಾಡುವ ಪ್ರವೃತ್ತಿಯನ್ನೂ ತೋರುತ್ತಾನೆ. ಅಲ್ಲದೆ ವಯಸ್ಕ ಜವಾಬ್ದಾರಿ ವಹಿಸಿಕೊಳ್ಳುವುದರಲ್ಲಿ ಆತ ಮಾನಸಿಕವಾಗಿ ಅಶಕ್ತನಾಗಿರುತ್ತಾನೆ. ಅಹಿತಕರ ಸನ್ನಿವೇಶದಿಂದ ಪಾರಾಗಲು ಆತನಿಗೆ ಪ್ರಬಲವಾದ ಅಸ್ತ್ರವೆಂದರೆ ರೋಗ. ಜೀವನದಲ್ಲಿ ತಾನು ಅನುಭವಿಸಿದ ಅಥವಾ ಅನುಭವಿಸಬಹುದಾದ ಸೋಲಿನಿಂದ ಗಮನವನ್ನು ಬೇರೆಡೆ ಸೆಳೆಯಲು ಅದೊಂದು ಅನುಕೂಲಕರವಾದ ನೆಪ. ಉನ್ಮಾದರೋಗಿ ಇತರರನ್ನು ವಂಚಿಸುವುದರ ಜೊತೆಗೆ ತನ್ನನ್ನು ತಾನೇ ವಂಚಿಸಿಕೊಳ್ಳುತ್ತಾನೆ. ಉನ್ಮಾದರೋಗಲಕ್ಷಣಗಳು ಕೆಲವು ಸಲ ಅವುಗಳಿಗೆ ಕಾರಣವಾದ ಸನ್ನಿವೇಶ ಅಥವಾ ಜನ ಬದಲಾವಣೆÂಯಾದಾಗ ತಮ್ಮಷ್ಟಕ್ಕೆ ತಾವೇ ಇದ್ದಕ್ಕಿದ್ದಂತೆಯೇ ಮಾಯವಾಗಬಹುದು.
ಉನ್ಮಾದರೋಗಿಗಳು ತಮ್ಮ ರೋಗವನ್ನು ಸಿದ್ಧಪಡಿಸಲು ಎಪ್ಟೇ ಕಷ್ಟವನ್ನಾದರೂ ತಡೆದುಕೊಳ್ಳುವರು. ಏನುಮಾಡಿದರೂ ಮಾಡಿಸಿಕೊಳ್ಳುವರು. ಆಸ್ಪತ್ರೆಯಲ್ಲಿ ಕಂಗೆಟ್ಟ ಹುಚ್ಚರೊಂದಿಗೆ ಇರಿಸಿದರೂ ಇರುವರು. ಶಸ್ತ್ರಕ್ರಿಯೆಗಳಿಗೂ ಮೈಯೊಡ್ಡಬಹುದು. ತಮಗೆ ತಾವೇ ಗಾಯ, ಪೆಟ್ಟು, ಅಪಾಯ ಮಾಡಿಕೊಳ್ಳಬಹುದು. ಯಾವುದೋ ಸೇಡನ್ನು ತೀರಿಸಿ ಕೊಳ್ಳುವೆವೆಂದು ತಮ್ಮ ಪ್ರಾಣವನ್ನೂ ತೆಗೆದುಕೊಳ್ಳಲು ಯತ್ನಿಸುವುದುಂಟು. ಇದಕ್ಕೆ ಯಾರು ಯಾರೋ ಕಾರಣವೆಂದೂ ಕಾಗದ ಬರೆದಿಡಬಹುದು. ಕೆಲವೇಳೆ ಕನಿಕರವನ್ನೋ ನೆರವನ್ನೋ ಪಡೆಯಲಪೇಕ್ಷಿಸಿ ಪ್ರಾಣ ಕಳೆದುಕೊಳ್ಳುವ ಬೆದರಿಕೆಯನ್ನೂ ಸುಮ್ಮಸುಮ್ಮನೆ ಹಾಕುವುದುಂಟು. ಹಾಗೇನಾದರೂ ಸತ್ತರೆ ಅದು ಕೇವಲ ಆಕಸ್ಮಿಕವೇ. 

ನಿದಾನ
ಮೈಯಲ್ಲಿ ಯಾವ ಅಂಗದಲ್ಲೂ ನಿಜವಾಗಿಯೂ ರೋಗ ಇಲ್ಲವೆಂದು ಮೊದಲು ಖಾತರಿಮಾಡಿಕೊಂಡು, ರೋಗಿಯ ಉದ್ದೇಶಗಳನ್ನು ಗುರುತಿಸಿ, ರೋಗ ಲಕ್ಷಣಗಳು ಅವಕ್ಕೆ ಹೊಂದುವುವೇ ಎಂಬುದನ್ನು ತಿಳಿಯಬೇಕು. ಎಷ್ಟೋ ವೇಳೆ ಶಾರೀರಿಕ ರೋಗಗಳಂತೆಯೇ ಮನೋಜನ್ಯ ರೋಗಲಕ್ಷಣಗಳೂ ಇರುವುದರಿಂದ ರೋಗಿಗೆ ಉನ್ಮಾದ ವಿರುವುದೆಂದು ತೀರ್ಮಾನಿಸುವ ಮುಂಚೆ ಚೆನ್ನಾಗಿ ಪರೀಕ್ಷಿಸಬೇಕು. ಅಂಗಗಳು ಕೆಟ್ಟಿರುವುದ ರಿಂದ ಬರುವ ರೋಗಲಕ್ಷಣಗಳು ರೋಗಿಯಲ್ಲಿ ಇರುವುವೇ ಎಂಬುದನ್ನು ಖಚಿತವಾಗಿ ಗುರುತಿಸಬೇಕು. ಅವು ಚೆನ್ನಾಗಿ ಗೊತ್ತಿರುವ ವೈದ್ಯ, ವೈದ್ಯ ಸಿಬ್ಬಂದಿಗೆ ಉನ್ಮಾದ ರೋಗ ಬಂದರೆ, ರೋಗವನ್ನು ಗುರುತಿಸುವುದು ಬಲು ಕಷ್ಟ. ರೋಗಿಗೆ ಯಾವ ರೋಗಲಕ್ಷಣಗಳನ್ನೂ ಸೂಚಿಸಬಾರದು. ಏಕೆಂದರೆ, ರೋಗಿ ಅದನ್ನೇ ಪಟ್ಟಾಗಿ ಹಿಡಿದುಕೊಳ್ಳುವನು. ರೋಗಿಗೆ ಕೇವಲ ಗುಣಕಾರಕ ಸೂಚನೆಗಳನ್ನು ಕೊಟ್ಟಾಗ ರೋಗಲಕ್ಷಣಗಳು ಇಲ್ಲದಂತಾದರೆ ಅವನನ್ನು ಉನ್ಮಾದಿ ಎನ್ನುವುದಿಲ್ಲ. ಅಂಗಗಳು ನಿಜವಾಗೂ ಕೆಟ್ಟು ಸಂಭವಿಸಿದ ರೋಗದ ಲಕ್ಷಣಗಳು ಕೂಡ ಕೆಲವೇಳೆ ಹೀಗೇ ತಗ್ಗಬಹುದು. ಉನ್ಮಾದರೋಗಿಯ ಪರೀಕ್ಷೆಗೆ ಕೇವಲ ನರಮಿದುಳಿನ ವಿಜ್ಞಾನಿ ಸಾಕಾಗದು. ಇಡೀ ವೈದ್ಯವೆಲ್ಲವನ್ನೂ ತಿಳಿದವನು ಬೇಕು. ಬೀರಿದ ಪೆಡಸಣೆ (ಡಿಸೆಮಿನೇಟೆಡ್ ಸ್ಕ್ಲೀರೋಸಿಸ್), ಕಾರ್ಬನ್ ಮಾನಾಕ್ಸೈಡ್ ವಿಷವೇರಿಕೆ, ಮಿದುಳ ರಕ್ತನಾಳರೋಗ. ಮಿದುಳುರಿತದ ಜಡತೆ (ಎನ್ಸೆಲೈಟಿಸ್ ಲೆತಾರ್ಜಿಕ) ರೋಗಗಳನ್ನು ಉನ್ಮಾದವೆಂದೂ ತಪ್ಪು ತಿಳಿಯುವ ಸಂದರ್ಭಗಳೇ ಹೆಚ್ಚು. ನಡು ವಯಸ್ಸಿನ ತನಕ ಚೆನ್ನಾಗಿದ್ದು ಅನಂತರ ಮೊತ್ತಮೊದಲ ಉನ್ಮಾದ ಲಕ್ಷಣಗಳು ಕಂಡುಬಂದರೆ ಅದು ಬರೀ ಮನೋರೋಗ ಆಗಿರಲಾರದು. ಈ ಲಕ್ಷಣಗಳು ತಾವಾಗೇ ಇಳಿದುಹೋದರೆ ಉನ್ಮಾದವಿರಬಹುದು. 
ಚಿಕಿತ್ಸೆ, ಅಭಿಪ್ರೇರಣೆ ಮತ್ತು ರೋಗಲಕ್ಷಣದೊಡನೆ ಅದಕ್ಕೆ ಇರುವ ಸಂಬಂಧ_ ಇವುಗಳನ್ನು ತಿಳಿದುಕೊಳ್ಳಲು ರೋಗಿಗೆ ಸಾಧ್ಯವಾಗುವುದಾದರೆ, ಈ ರೋಗಲಕ್ಷಣಗಳನ್ನು ತೊಡೆದು ಹಾಕಲು ಸಾಧ್ಯ. ಜೀವನದ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳುವ ಇಚ್ಛೆ ಪ್ರಬಲವಾಗಿದ್ದಾಗ, ರೋಗಿ ಮನೋವೈದ್ಯನೊಡನೆ ಸಹಕರಿಸುವುದು ಕಷ್ಟ. ಆತ ತನಗರಿವಿಲ್ಲ ದಂತೆಯೇ ಚಿಕಿತ್ಸೆಯನ್ನು ವಿರೋಧಿಸುತ್ತಾನೆ. 
ಜನಸಾಮಾನ್ಯರಲ್ಲಿ ಇಂದೂ ಕೂಡ ಪ್ರಚಲಿತವಾಗಿರುವ ನಂಬಿಕೆ ಚಿಕಿತ್ಸೆಗಳು ಮತ್ತು ಪವಾಡ ಚಿಕಿತ್ಸೆಗಳು ತಾತ್ಕಾಲಿಕ ಪರಿಹಾರವನ್ನು ಮಾತ್ರ ಒದಗಿಸಬಲ್ಲವು, ಅಷ್ಟೇ. ನೆಮ್ಮದಿಕಾರಕ ಮದ್ದುಗಳು ಈ ರೋಗಿಗಳ ಮೇಲೆ ಪರಿಣಾಮಕಾರಿಗಳಾಗುವುದಿಲ್ಲ. ಹೆಚ್ಚೆಂದರೆ ಅವರ ಆತಂಕವನ್ನು ಕಡಿಮೆ ಮಾಡಬಲ್ಲವು. ಇವುಗಳ ಜೊತೆಗೆ ಮನೋಚಿಕಿತ್ಸೆ, ಸಲಹೆ ಮತ್ತು ಮನವೊಪ್ಪಿಗೆ ವಿಧಾನಗಳನ್ನೂ ಸಂದರ್ಭೋಚಿತವಾಗಿ ಬಳಸುವುದು ಉತ್ತಮ. 

ಏನೂ ಮಾಡದಿರುವುದಕ್ಕಿಂತಲೂ ಮಿತಿ ಮೀರಿದ ಚಿಕಿತ್ಸೆ ಹೆಚ್ಚು ಅಪಾಯಕರ. ಇದರಿಂದ ರೋಗ ಇನ್ನಷ್ಟು ಬೇರೂರಿ ಉನ್ಮಾದ ಏರುತ್ತದೆ. ರೂಢಿಯಲ್ಲಿಲ್ಲದ ಚಿಕಿತ್ಸೆಗಳನ್ನು ಪರಿಣಿತರಿಗೇ ಬಿಟ್ಟುಬಿಡಬೇಕು. ರೋಗಿಯ ಮನೋಭಾವವನ್ನು ತಿಳಿಯುವಷ್ಟೇ ಸಾಮಾನ್ಯ ತಿಳಿವಳಿಕೆಯೂ ಇರಬೇಕು. ರೋಗದ ಲಕ್ಷಣಗಳನ್ನು ತೆಗೆಯುವುದೇ ಮುಖ್ಯವಲ್ಲ. ಸಮಾಜದಲ್ಲಿ ರೋಗಿ ಹೊಂದಿಕೊಳ್ಳುವಂತೆ ಮಾಡುವುದು ಗುರಿಯಾಗಿರಬೇಕು. ಕಷ್ಟದ, ತೊಡಕಿನ, ಸಂದರ್ಭ, ಘಟನೆ ಇವುಗಳನ್ನು ರೋಗಿ ಎಲ್ಲರಂತೆ ಎದುರಿಸುವಂತೆ ನೆರವಾಗುವ ಚಿಕಿತ್ಸೆ ಮಾಡಬೇಕೇ ಹೊರತು ಆತನ ಉನ್ಮಾದದ ಕಾರಣ, ರೀತಿ ಇವು ಮುಖ್ಯವಲ್ಲ. ಇದಕ್ಕಾಗಿ ರೋಗಿ ಮಾಡಿದ್ದರಲ್ಲಿ ತಪ್ಪು ಕಂಡುಹಿಡಿಯದೆ ಅವನ ಸಮಯ ಸಂದರ್ಭ ಮನೋವ್ಯತ್ಯಾಸಗಳು ಆಸೆಗಳು ಇವನ್ನೆಲ್ಲ ಚೆನ್ನಾಗಿ ವಿಚಾರಿಸಿ ತಿಳಿಯಬೇಕು. ಇದಕ್ಕೆ ಮನೋವಿಜ್ಞಾನದ ತಿಳಿವಳಿಕೆ ಚೆನ್ನಾಗಿರಬೇಕು. ಉನ್ಮಾದದ ಹಳೆಯ ವಿಚಾರಗಳನ್ನು ಸಂಗತಿಗಳನ್ನು ಅನುಭವಗಳನ್ನು ಕೆದಕುವುದರಿಂದ ಒಳಿತಾಗದು. ಪರಿಸರದ ಜನರೊಂದಿಗೆ ರೋಗಿ ಚೆನ್ನಾಗಿ ಹೊಂದಿಕೊಳ್ಳಲು ಸಾಧ್ಯವಾಗುವಂತೆ, ಆತನಿಗೆ ಅನುಭವೀ ವೈದ್ಯ ಸೂಕ್ತ ಸಲಹೆ ವಿವರಣೆ ನೀಡಿ ಸರಿಯಾಗಿ ನೆರವಾಗಬೇಕು. ಮೊದಮೊದಲಲ್ಲೇ ರೋಗ ಲಕ್ಷಣಗಳನ್ನು ಕಳೆದರೆ ರೋಗಿಗೂ ವೈದ್ಯನಲ್ಲಿ ನಂಬಿಕೆ ಹುಟ್ಟುವುದು. ಚಿಕಿತ್ಸೆ ಮಹತ್ತರವಾಗಿ ಇರದಿದ್ದರೂ ವೈದ್ಯನ ಸಮಯವನ್ನು ನುಂಗುವಂಥದಾಗಿರುತ್ತದೆ. ರೋಗಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಇರಿಸಬೇಕಿಲ್ಲ. ಆದರೆ ರೋಗಿಯ ಪರಿಸರ ಸಮರ್ಪಕವಾಗಿಲ್ಲದಾಗ, ಆತ ಗಾಯಮಾಡಿಕೊಳ್ಳುವ ಅಥವಾ ತನ್ನ ಪ್ರಾಣ ತೆಗೆದುಕೊಳ್ಳುವ ಯತ್ನ ನಡೆಸುತ್ತಿದ್ದರೆ, ಹುಸಿಹುಚ್ಚು, ಕೈಕಾಲುಗಳು ಬಿದ್ದುಹೋಗು ವಿಕೆ ಇವು ಇದ್ದರೆ, ಅವನನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಇನ್ನಷ್ಟು ರೋಗ ಲಕ್ಷಣಗಳನ್ನು ಸಂಪಾದಿಸುವುದು ಸಾಧ್ಯವಿದೆ ! ಇನ್ನೊಂದೆಂದರೆ, ರೋಗಿಯನ್ನಂತೂ ಒಂಟಿಯಾಗಿರಲು ಬಿಡಬಾರದು. ಉನ್ಮಾದದ ಕೆಲವು ಲಕ್ಷಣಗಳಿಗೆ ತ್ವರಿತವಾಗಿ ಚಿಕಿತ್ಸೆ ಮಾಡಬೇಕು. ಆಹಾರ ಸೇವನೆಯ ನಿರಾಕರಣೆಯನ್ನು (ಅನೊರೆಕ್ಸಿಯ) ಹಾಗೇ ಬಿಟ್ಟರೆ ರೋಗಿ ಆಹಾರವಿಲ್ಲದೆ ಸೊರಗುವನು. ಪಾಶರ್ವ್‌ವಾಯುವಿನ ಕೈಕಾಲುಗಳ ಚಿಕಿತ್ಸೆ ಆಗದಿದ್ದರೆ ಕೈಕಾಲುಗಳು ಹಾಗೇ ಸೆಟೆದುಕೊಂಡಿರುತ್ತವೆ. ಹುಸಿ ಕುರುಡ, ಕಿವುಡ, ತನ್ನ ಗುರುತೇ ತನಗಿಲ್ಲದವ-ಇಂಥವರಿಗೆ ಯಾವ ಚಿಕಿತ್ಸೆ ಮಾಡುವುದೂ ಕಷ್ಟವೇ. ಆದ್ದರಿಂದ ಆ ಲಕ್ಷಣಗಳ ಚಿಕಿತ್ಸೆ ಮೊದಲು ಆಗಬೇಕು. ಸೂಚನಾಕ್ರಮಗಳನ್ನು ಕೈಗೊಳ್ಳಬೇಕು. ಉಣ್ಣುವಾಗ ಉಸ್ತುವಾರಿ ಇಟ್ಟು ಆತ ಸಾಕಷ್ಟು ತಿನ್ನುವಂತೆ ನೋಡಿಕೊಳ್ಳಬೇಕು. ಪಾಶರ್ವ್‌ವಾಯುವಿಗೆ ಭಯಬೀತ ಚಿಕಿತ್ಸೆ (ಫಿಸಿಯೊತೆರಪಿ). ಕ್ಷೀಣಸ್ವರಕ್ಕೆ ಧ್ವನಿಯ ಸಾಧನೆಗಳನ್ನು ಮಾಡಿಸಬೇಕು. ಸಮ್ಮೋಹನ ಕ್ಕಿಂತಲೂ (ಹಿಪ್ನೊಸಿಸ್) ಎಚ್ಚರವಾಗಿದ್ದಾಗಿನ ಸೂಚನಾಕ್ರಮಗಳೇ ಒಳ್ಳೆಯವು. ಈ ಕ್ರಮದಿಂದ ಒಳ್ಳೆಯದೂ ಆಗಬಹುದು. ಕೆಡುಕೂ ಆಗಬಹುದು. ತನ್ನಲ್ಲಿ ತನಗೆ ನಂಬಿಕೆಯಿರುವ, ಚಾಲೂಕಾದ ವೈದ್ಯ ಹೆಚ್ಚು ಪರಿಣಾಮಕಾರಿ. ಸಾಮಾನ್ಯವಾಗಿ, ಸಂವೇದನವಾಹಕ ಅಥವಾ ಚಾಲಕ ಲಕ್ಷಣಗಳನ್ನು ತಾಳ್ಮೆ ನಿರ್ಧಾರ ನಂಬುಗೆಗಳಿಂದ ಪುಸಲಾಯಿಸಿ ಸೂಚನೆಗಳನ್ನು ಕೊಟ್ಟು ಹೋಗಲಾಡಿಸಬಹುದು. ಪೆಂಟೋತಾಲ್ ಸೋಡಿಯಂನ್ನು ರಕ್ತನಾಳದ ಮೂಲಕ ಕೊಟ್ಟರೆ, ರೋಗಿ ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ವಿಚಾರಗಳನ್ನೆಲ್ಲ ಹೊರಗೆಡವಬಹುದು. ಇವುಗಳ ಬಳಕೆಯಲ್ಲಿ ಮಾತ್ರ ವೈದ್ಯ ಎಚ್ಚರದಿಂದಿರಬೇಕು. 

ಉದ್ಯೋಗದ ಆಯ್ಕೆ ಪರಿಹಾರದ ಬೇಡಿಕೆಗಳಂತೆ ರೋಗದ ಸಾಮಾಜಿಕ ಕಾರಣದ ತೀರುವೆ. ರೋಗಿಯ ಸಂಬಂಧಿಗಳ ಹಾಗೂ ಗೆಳೆಯರ ಅತ್ತ ಕಷ್ಟವೂ ಅಲ್ಲದ ಇತ್ತ ಸಡಿಲವೂ ಅಲ್ಲದ ಸರಿಸಮನಾದ ನಡೆವಳಿಕೆ-ಇವೆಲ್ಲ ಚಿಕಿತ್ಸೆಯಲ್ಲಿ ಮುಖ್ಯ. ಗಾಯ, ಪೆಟ್ಟುಗಳ ಎದುರಾಗಿ ಉನ್ಮಾದ ಮರುವರ್ತನೆಯಾಗಿ ಏಳುವುದು ಸಾಮಾನ್ಯ. ಉದ್ದೇಶ ಅಷ್ಟಾಗಿ ಎದ್ದು ಕಾಣದಿದ್ದರೂ ಇದನ್ನು ಬರಿಯ ಬೂಟಾಟಿಕೆ ಎಂದು ತಳ್ಳಿಹಾಕುವಂತಿಲ್ಲ. ಏಕೆಂದರೆ, ರೋಗಿ ಬೇನೆ ಬಿದ್ದು ನರಳುತ್ತಿರುವುದು, ಕಳವಳ, ಕೆರಳು, ನಿದ್ದೆಗೇಡು ಇವೆಲ್ಲ ನಿಜ. ಇದನ್ನು ಹೋಗಲಾಡಿಸಿಕೊಳ್ಳಲು ರೋಗಿಯೂ ಆಸಕ್ತನಾಗಿರುತ್ತಾನೆ. ಇಷ್ಟಾದರೂ ಇವೆಲ್ಲ ಮನೋಜನ್ಯ. ಹೀಗೆಂದರೆ ಮನೋರೋಗಚಿಕಿತ್ಸೆಯೇ ಆಗಬೇಕು ಎನ್ನುವುದು ಸರಿಯಲ್ಲ. ಗಾಯವಾದ ಮೇಲಿನ ಪರಿಹಾರದ ವಿಚಾರವಾಗಿ ಎದ್ದ ಉನ್ಮಾದದಲ್ಲಿ ಮನೋರೋಗ ಚಿಕಿತ್ಸೆಯಿಂದ ಆಗುವಷ್ಟು ಕಡಿಮೆ ಅನುಕೂಲ ಇನ್ನಾವ ಮನೋರೋಗಗಳಲ್ಲೂ ಕಾಣಬರದು. ಮೊದಲ ಹಂತಗಳಲ್ಲೇ ಬೇಗನೆ ಪರಿಹಾರ ಕೊಡಿಸಿ, ಆಗಿರುವ ಗಾಯಗಳನ್ನು ವಾಸಿಮಾಡಿ, ರೋಗಿಯನ್ನು ಎಂದಿನ ಚಟುವಟಿಕೆಗಳಲ್ಲಿ ತೊಡಗಿಸಿದರೆ ಉನ್ಮಾದ ಬೇಗನೆ ಇಳಿಯುತ್ತದೆ. ಎಷ್ಟೋ ಕಾಲಗಳಿಂದಲೂ ರೋಗಲಕ್ಷಣಗಳು ಇದ್ದೇ ಇದ್ದರೂ ಆತನನ್ನು ಎಂದಿನ ಕೆಲಸ ಕಸಬುಗಳಿಗೆ ಹಿಂದಿರುಗಿಸುವುದು ಅತ್ಯಂತ ಶ್ರೇಷ್ಠ ಮಾರ್ಗ. ಮತ್ತೆ ಮತ್ತೆ ವೈದ್ಯನ ಭೇಟಿ ನಡೆಸುವುದಕ್ಕಿಂತಲೂ ಇದು ಎಷ್ಟೋ ಒಳ್ಳೆಯದು. ಇಂಥ ಚಿಕಿತ್ಸೆಯಲ್ಲಿ ಮನೋರೋಗ ಚಿಕಿತ್ಸೆ ಸಹಾಯಕವೇ ಹೊರತು ಪ್ರಧಾನವಲ್ಲ. 
ಮದುವೆ ಎಂದಿಗೂ ಉನ್ಮಾದಕ್ಕೆ ಚಿಕಿತ್ಸೆಯಲ್ಲ. ಹಾಗೆ ಮಾಡುವುದಾದರೆ, ಉನ್ಮಾದ ರೋಗಿಯನ್ನು ಮದುವೆಯಾದವರಿಗೆ ತಾಪತ್ರಯ ಕಟ್ಟಿಟ್ಟಂತೆ. ಆದರೆ ಉನ್ಮಾದರೋಗಿಗಳನ್ನು ಯಾರೂ ಮದುವೆ ಮಾಡಿಕೊಳ್ಳಬಾರದು ಎಂದಲ್ಲ. ಆಗ ಚಿಕಿತ್ಸೆಗಿಂತಲೂ ಹೆಚ್ಚಿನ ವಿಚಾರ ಗಳನ್ನು ಯೋಚಿಸಬೇಕು. ಉನ್ಮಾದ ರೋಗಿಯ ಬೇಕು ಬೇಡಗಳನ್ನು ಜೀವನ ಸಂಗಾತಿ ಮತ್ತು ಮನೆಯವರು ಎಚ್ಚರಿಕೆಯಿಂದ ಗಮನಿಸಬೇಕು. ಉನ್ಮಾದ ಮರುಕಳಿಸದಂತೆ ನೋಡಿಕೊಳ್ಳಬೇಕು. 

ಗತಿ, ಮುನ್ನರಿವು
ರೋಗಿಯ ವ್ಯಕ್ತಿತ್ವ ಸಮಾಜದ ಪರಿಸರ, ದೊರೆತ ಚಿಕಿತ್ಸೆ ಇವುಗಳಿಗೆ ತಕ್ಕಂತೆ ರೋಗಿಯ ಪ್ರಗತಿ ಸಾಧಿಸುತ್ತದೆ. ಈ ರೋಗ ಕಾಣಿಸುವ ಮುಂಚೆ ಬಹುಕಾಲದಿಂದ ಇದರ ಲಕ್ಷಣಗಳು ಸ್ವಲ್ಪ ಪ್ರಮಾಣದಲ್ಲಿ ತಲೆದೋರುತ್ತಿದ್ದರೆ, ಉನ್ಮಾದ ಕೆರಳಿಸುವ ಸಂದರ್ಭಗಳು ಮುಂದುವರಿಯದಂತೆ ನೋಡಿಕೊಳ್ಳಬೇಕು. ತಕ್ಕಷ್ಟು ಚಿಕಿತ್ಸೆ ಮಾಡದಿರುವುದೂ ಮಿತಿಮೀರಿದ ಚಿಕಿತ್ಸೆಯೂ ಒಳ್ಳೆಯದಲ್ಲ. ಆದರೆ, ಈ ರೋಗದಲ್ಲಿ ಹೀಗೇ ಆದೀತೆಂದು ಹೇಳಿದ್ದು ಎಷ್ಟೋ ಬಾರಿ ಸುಳ್ಳಾಗಿ ಹಲವು ವರ್ಷಗಳಿಂದಲೂ ಜೋರಾಗಿದ್ದ ರೋಗ ವಾಸಿಯಾಗಿದೆ. ತಡಮಾಡದೆ ಚಿಕಿತ್ಸೆ ಕೈಗೊಂಡರೆ ಮಕ್ಕಳಲ್ಲಿ ಚೆನ್ನಾಗಿ ಗುಣವಾಗಬಹುದು. ಯಾವುದೋ ದಿಗಿಲಿನ ಫಲವಾಗಿ ಒಂದೇ ಲಕ್ಷಣವಿದ್ದರೂ ಉನ್ಮಾದ ಕೆರಳಿಕೆಯ ಕಾರಣಗಳು ಇದ್ದೇ ಇರುವುದಾದರೆ ಅದು ವಾಸಿಯಾಗುವುದು ಕಷ್ಟವೇ. ಗಾಯ ಪೆಟ್ಟುಗಳಿಗೆ ಕಡೆಯದಾಗಿ ಪರಿಹಾರದ ತೀರ್ಮಾನ ಆದ ಹೊರತು ಯಾವ ವೈದ್ಯಕ ಚಿಕಿತ್ಸೆಯಿಂದಲೂ ಫಲವಾಗುವುದಿಲ್ಲ. 

ಯುದ್ಧಕಾಲದಲ್ಲಿ ಸೈನಿಕ ಆಸ್ಪತ್ರೆಯಲ್ಲೇ ಇರುವ ತನಕ ಮನೋರೋಗ ಚಿಕಿತ್ಸೆಗಳಿಂದ ಹೆಚ್ಚಿನ ಉಪಯೋಗವಾದಂತೆ ಕಂಡರೂ ಕೆಲಸಕ್ಕೆ ಹಿಂತಿರುಗಿದರೆ ಉನ್ಮಾದ ಮತ್ತೆ ಅವನನ್ನು ಕಾಡುವುದು. ಇದರ ಪರಿಣಾಮ ಬಗೆಬಗೆಯದಾಗಿದ್ದರೂ ರೋಗಿ ಹೆಣವಾಗಿ ಬಿದ್ದಿರುವುದೇ ಸಾಮಾನ್ಯ.	(ಡಿ.ಎಸ್.ಎಸ್.;ಡಿ.)

ಉನ್ಮಾದವಿಷಣ್ಣತಾ ಮನೋವಿಕ್ಷಿಪ್ತಿ
ಉನ್ಮಾದವಿಷಣ್ಣತಾ ಮನೋವಿಕ್ಷಿಪ್ತಿಯು ಗಂಭೀರ ಸ್ವರೂಪದ ಮನೋರೋಗಗಳಲ್ಲಿ ಒಂದು (ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್). ತೀವ್ರವಾದ ಏರಿಳಿತಗಳಿಂದ ಕೂಡಿದ ಭಾವವಿಕಾರ. ಈ ರೋಗಕ್ಕೀಡಾದ ವ್ಯಕ್ತಿಯ ಮನಃಸ್ಥಿತಿ ಯಲ್ಲಿ ಅಪಾರವಾದ ಬದಲಾವಣೆಗಳುಂಟಾಗುತ್ತವೆ. ಮುಖ್ಯವಾಗಿ ವ್ಯಕ್ತಿ ಒಮ್ಮೆ ಉನ್ಮತ್ತನಾಗಿ ಇನ್ನೊಮ್ಮೆ ಖಿನ್ನನಾಗಿ ವರ್ತಿಸುತ್ತಾನೆ. ಅಮೆರಿಕದ ಮನೋವೈದ್ಯಕೀಯ ಸಂಘದ ಡಿ.ಎಸ್.ಎಮ್. ಮನೋರೋಗ ವಿಭಜನೆ ಕ್ರಮದ ಪ್ರಕಾರ ಈ ಕಾಯಿಲೆಯನ್ನು ದ್ವಿ-ಧ್ರುವ (ಬಯಫೊಲಾರ್) ಖಾಯಿಲೆ ಎಂದು ಪರಿಗಣಿಸಲಾಗಿದೆ. ಉನ್ಮಾದ ಒಂದು ಧ್ರುವವಾದರೆ, ವಿಷಣ್ಣತೆ ಇನ್ನೊಂದು ಧ್ರುವ.
ಪ್ರತಿಯೊಂದು ಸಮಾಜದಲ್ಲೂ ಸುಮಾರು ಶೇಕಡ ಒಂದರಷ್ಷು ಜನರಲ್ಲಿ ಭಾವ ವಿಕಾರಗಳು ಕಾಣಿಸಿಕೊಳ್ಳುತ್ತವೆ. ಉನ್ಮಾದ ವಿಷಣ್ಣತಾ ರೋಗದಲ್ಲಿ ಕಂಡುಬರುವ ಚಿಹ್ನೆಗಳು ವಾಸ್ತವವಾಗಿ ಎಲ್ಲರಲ್ಲೂ ಕಂಡುಬರುವ ಖಿನ್ನತೆ-ಸಂತೋಷಗಳ ಅತಿಯಾದ ಉತ್ಪ್ರೇಕ್ಷೆ. ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಬೇಸರ ಖಿನ್ನತೆ ಚಿಂತೆ ದುಃಖ ಪಾಪಭಾವಗಳಿಗೂ ತಾನು ನಿಷ್ಟ್ರಯೋಜಕ, ತನ್ನ ಬದುಕು ನಿರರ್ಥಕ, ಎಂಬ ಭಾವನೆಗಳಿಗೂ ಈಡಾಗಿಯೇ ಇರುತ್ತಾರೆ. ಹಾಗೆಯೇ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಕಾರಣವಿಲ್ಲದೆ ಅಪಾರವಾದ ಖುಷಿ ಸಂತೋಷಗಳಿರುತ್ತವೆ. ತನ್ನನ್ನು ಯಾರೂ ಹಿಡಿಯಲಾರರೆಂಬ ಉತ್ಸಾಹವೂ ಇರುವು ದುಂಟು. ಏನನ್ನಾದರೂ ಸಾಧಿಸಿಯೇನೆಂಬ ಆತ್ಮವಿಶ್ವಾಸವೂ ಧೈರ್ಯವೂ ಬರುತ್ತಿರುತ್ತದೆ. ಎಂಥ ಕಷ್ಟದ ಕೆಲಸವನ್ನಾದರೂ ಎಷ್ಟೇ ಹೊತ್ತಾದರೂ ಮಾಡಿ ಮುಗಿಸುವ ಶಕ್ತಿ ಸಾಮರ್ಥ್ಯ ಗಳೂ ಯಾರು ಏನು ಕೇಳಿದರೂ ಓಹೋ ಅದಕ್ಕೇನು ಎಂಬ ಒಳ್ಳೆಯತನ ಧಾರಾಳತನಗಳೂ ಕೊನೆಯಿಲ್ಲದ ಆಕಾಂಕ್ಷೆಗಳೂ ಯೋಜನೆಗಳೂ ಅವನ್ನೆಲ್ಲ ಸಾಧಿಸಬೇಕೆಂಬ ಆಸೆ ಛಲಗಳೂ ಎಲ್ಲರ ಅನುಭವಕ್ಕೂ ಒಳಪಟ್ಟ ಭಾವಗಳೇ. ಇವುಗಳೆಲ್ಲ ಒಂದು ಮಿತಿಯೊಳಗೆ ಉಳಿದು, ವಾಸ್ತವಿಕತೆಯನ್ನು ಮರೆಯದೆ ಇದ್ದರೆ ವ್ಯಕ್ತಿ ಆರೋಗ್ಯವಂತನಾಗಿಯೇ ಇರುತ್ತಾನೆ. ಆದರೆ ಈ ಭಾವಗಳು ಮಿತಿಮೀರಿ ಹೋಗಿ ಆತ ವಾಸ್ತವ ಸ್ಥಿತಿಯನ್ನೇ ಮರೆತಾಗ ಉನ್ಮಾದವಿಷಣ್ಣತಾ ರೋಗ ತಲೆಹಾಕಿದೆಯೆನ್ನಬಹುದು. 

ವಿಷಾದಕ್ಕೀಡಾಗುವ ರೋಗಿಗಳೇ ಹೆಚ್ಚಾದರೂ ಅನೇಕ ರೋಗಿಗಳ ಮನಃಸ್ಥಿತಿ ಉನ್ಮತ್ತತೆಯಿಂದ ವಿಷಾದಕ್ಕೆ, ವಿಷಾದದಿಂದ ಉನ್ಮತ್ತತೆಗೆ ತುಯ್ಯುತ್ತಿರುತ್ತದೆ. ಈ ರೋಗಿಗಳು ಈ ಹೊತ್ತು ಉನ್ಮತ್ತರಾಗಿ, ಆನಂದತುಂದಿಲರಾಗಿ, ತಮಾಷೆಯಾಗಿ, ತಮ್ಮನ್ನು ಬಿಟ್ಟರೆ ಇಲ್ಲ ಎಂದುಕೊಂಡು ಅತಿಯಾದ ಚಟುವಟಿಕೆಯಿಂದ ತಿರುಗಾಡಿಕೊಂಡಿದ್ದು, ಇನ್ನೊಂದು ಹೊತ್ತು ಎಣೆಯಿಲ್ಲದ ದುಃಖ ಚಿಂತೆ ಆಯಾಸ ಬೇಸರಗಳಿಂದ ಕೂಡಿ, ತಾವು ನಿಷ್ಷ್ರಯೋಜ ಕರು, ಮಹಾಪಾಪಿಗಳು, ಅಯೋಗ್ಯರು ಎಂಬ ಭಾವನೆಯಿಂದ ಪುರ್ತಿ ಮನಸ್ಸು ಕುಂದಿ ಮೂಲೆ ಹಿಡಿದಿರುತ್ತಾರೆ. 

ಗಂಡಸರಿಗಿಂತ ಹೆಂಗಸರಲ್ಲಿ ವಿಷಣ್ಣತಾ ಪ್ರತಿಕ್ರಿಯೆ (ಖಿನ್ನತೆ) ಸ್ವಲ್ಪ ಹೆಚ್ಚು. ಖಿನ್ನತೆ ಕ್ರಮೇಣ ಕಾಣಿಸಿಕೊಳ್ಳುವುದಾದರೂ ಕೆಲವು ದಿನಗಳಲ್ಲೇ ಇದು ತೀವ್ರವಾಗಬಹುದು. ಸಾಮಾನ್ಯವಾಗಿ ಈ ಪ್ರತಿಕ್ರಿಯೆ ಕಾಣಿಸಿಕೊಳ್ಳುವುದು ಜೀವನದಲ್ಲಿ ಒಂದಲ್ಲ ಒಂದು ವಿಧವಾದ ಕೆಡುಕು ಆದಾಗ. ಉದಾಹರಣೆಗೆ. ತುಂಬ ಪ್ರೀತಿಸಿದವರ ಸಾವು, ಪ್ರೇಮಭಂಗ, ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಳ್ಳುವುದು, ವ್ಯವಹಾರದಲ್ಲಿ ನಷ್ಟ ಹೊಂದುವುದು-ಇತ್ಯಾದಿ ದುರ್ಘಟನೆಗಳು ಖಿನ್ನತೆಗೆ ಎಡೆ ಕೊಡಬಹುದು. ಅಪರೂಪವಾಗಿ ಕೆಲವರಿಗೆ ವಿಶೇಷ ಬಡ್ತಿ ದೊರೆತು, ಮೇಲಿನ ಹುದ್ದೆಗೆ ಹೋದಾಗ ಅವರಲ್ಲಿ ಖಿನ್ನತೆ ಕಾಣಿಸಿಕೊಳ್ಳಬಹುದು. 
ವಿಷಣ್ಣತಾ ಪ್ರತಿಕ್ರಿಯೆಯ ಪ್ರಾರಂಭದಲ್ಲಿ ವ್ಯಕ್ತಿಗಳ ಉತ್ಸಾಹ ಕುಂದಿ ಅವರ ಸಾಮಾನ್ಯ ಚಟುವಟಿಕೆಗಳೆಲ್ಲ ಕಡಿಮೆಯಾಗುತ್ತವೆ. ಜೊತೆಗೆ ತಾವೇನು ಇನ್ನು ಮುಳುಗಿಯೇ ಹೋದೆವು ಎಂಬ ಹತಾಶಭಾವವೂ ಕಾರಣವಿಲ್ಲದ ಶಾರೀರಿಕ ಬೇನೆಗಳೂ ತಲೆದೋರುತ್ತವೆ. ತಾವೇನೋ ಮಹತ್ತರವಾದ ಪಾಪ ಮಾಡಿದವರು. ತಮಗಿನ್ನು ಕ್ಷಮೆ ಇಲ್ಲ, ಶಾಂತಿ ಇಲ್ಲ ಎಂಬ ದೃಢವಾದ ನಂಬಿಕೆ ರೋಗಿಗಳನ್ನು ಕಾಡುತ್ತದೆ. ಅವರ ಬದುಕಿನ ಉತ್ಸಾಹವನ್ನೆಲ್ಲ ಕುಂದಿಸುತ್ತದೆ. ಕೆಲವು ಖಿನ್ನರೋಗಿಗಳು ತಳಮಳದಿಂದ ಕೂಡಿರುತ್ತಾರೆ. ಖಿನ್ನರಾಗಿದ್ದರೂ ಇವರು ಸುಮ್ಮನೇ ಇರಲಾರರು. ಉದ್ವಿಗ್ನರಾಗಿ, ವ್ಯಗ್ರರಾಗಿ ಕೂತಲ್ಲಿ ಕೂರಲಾರದೆ ನಿಂತಲ್ಲಿ ನಿಲ್ಲಲಾರದೆ ವಿಪರೀತವಾಗಿ ಸಂಕಟಪಡುತ್ತಾರೆ. ಇನ್ನು ಕೆಲವು ವಿಷಾದ ರೋಗಿಗಳು ಒಂದಿಷ್ಟೂ ಚುರುಕು-ಚಟುವಟಿಕೆಗಳಿಲ್ಲದೆ ಮಂದಬುದ್ಧಿಯವರಂತೆ ಮೂಲೆ ಹಿಡಿದಿರುತ್ತಾರೆ. 
ಖಿನ್ನತೆ ಉಲ್ಬಣಿಸಿದಾಗ ಈ ರೋಗಿಗಳು ನಿದ್ದೆ ಕಳೆದುಕೊಳ್ಳುತ್ತಾರೆ. ಹಸಿವು ಪುರ್ತಿ ಕುಂದಿಹೋಗುತ್ತದೆ. ದಿನ ದಿನಕ್ಕೆ ಮೈ ಬಡವಾಗುತ್ತ್ತದೆ. ತಾವು ಮಾಡಿದ ಮಹಾ ಪಾಪಕ್ಕಾಗಿ ಕ್ರೂರವಾದ ಶಿಕ್ಷೆಗೆ ಅರ್ಹರೆಂಬ ಭ್ರಾಂತಿ ತಲೆದೋರುತ್ತದೆ. ಇನ್ನೂ ತೀವ್ರವಾದ ಪರಿಸ್ಥಿತಿಯಲ್ಲಿ ರೋಗಿಗಳಿಗೆ ತಮ್ಮ ಸೋಲು ಚಾರಿತ್ರಿಕವೆನಿಸಿ, ತಾವು ಜಗತ್ಪ್ರಸಿದ್ಧ ಕೊಲೆಗಡುಕರಾಗಿ ಕಾಣಿಸಿಕೊಳ್ಳಬಹುದು. ತಾವು ಬದುಕಲು ಅನರ್ಹರು ಎಂಬ ಭಾವ ಅನೇಕ ರೋಗಿಗಳನ್ನು ಆತ್ಮಹತ್ಯೆಗೆ ಪ್ರಯತ್ನಿಸುವಂತೆ ಮಾಡುತ್ತದೆ. ಎಚ್ಚರಿಕೆ ವಹಿಸದಿದ್ದರೆ ಕೆಲವರು ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. 

ಖಿನ್ನತೆಯ ಬಗ್ಗೆ ಮೂರು ಬಗೆಯ ವಿವರಣೆಗಳಿವೆ: 1. ವ್ಯಕ್ತಿ ತನಗೆ ಬೇಕಾದವರ ಪ್ರೀತಿವಿಶ್ವಾಸಗಳನ್ನು ಅಥವಾ ಆರ್ಥಿಕ ಸುಭದ್ರತೆಯನ್ನು ಕಳೆದುಕೊಂಡಾಗ ತೋರಿಸುವ ಪ್ರತಿಕ್ರಿಯೆ: 2. ಆತ್ಮಾಭಿಮಾನಕ್ಕೆ ಧಕ್ಕೆ ಉಂಟಾದಾಗ ತೋರಿಸುವ ಪ್ರತಿಕ್ರಿಯೆ: 3. ವಾಸ್ತವ ವಾಗಿಯೂ ರೋಗಿ ಮಾಡಿದ ತಪ್ಪಿಗೆ, ಪಾಪಕ್ರಿಯೆಗೆ ಆತ ತೋರಿಸುವ ಪ್ರತಿಕ್ರಿಯೆ. 

ಅಲ್ಪಸ್ವಲ್ಟ ಉನ್ಮತ್ತತೆ ವಿಕೃತವೇನಲ್ಲ. ವಿಕೃತವೆನ್ನಿಸಿಕೊಳ್ಳುವ ಉನ್ಮಾದದಲ್ಲಿ ಎರಡು ಮಟ್ಟಗಳನ್ನು ಗುರುತಿಸಲಾಗಿದೆ. ತೀವ್ರೋನ್ಮಾದ ಮತ್ತು ಉನ್ಮಾದ ಸನ್ನಿ. ಉನ್ಮಾದ ರೋಗಿಗಳು ತೀರಾ ನಾಟಕೀಯವಾಗಿ ವರ್ತಿಸುವುದರಿಂದ ಮನೆಯವರಿಗೆ ಥಟ್ಟನೆ ಇವನಿಗೇನೋ ಆಗಿದೆ ಎಂಬುದು ಗೊತ್ತಾಗುತ್ತದೆ. ತಮ್ಮ ಭಾವೋದ್ರೇಕದಲ್ಲಿ ಉನ್ಮಾದ ರೋಗಿಗಳು ಇತರರನ್ನು ಕೊಲ್ಲಬಹುದು, ತಮ್ಮನ್ನೇ ಕೊಂದುಕೊಳ್ಳಬಹುದು. ಇವರನ್ನು ತಡೆಹಿಡಿಯದಿದ್ದರೆ ಊಟ, ನಿದ್ದೆ, ವಿಶ್ರಾಂತಿ ಒಂದೂ ಇಲ್ಲದೆ ರೋಗಿಗಳು ಪುರ್ತಿ ಬಳಲಬಹುದು. ಉನ್ಮಾದ ಸ್ಥಿತಿಯಲ್ಲಿ ಇವರು ಲೈಂಗಿಕ ಸಾಹಸಗಳಲ್ಲಿ ತೊಡಗಬಹುದು; ಎರಡು ಮೂರು ಮದುವೆ ಮಾಡಿಕೊಳ್ಳಬಹುದು; ಇದ್ದ ಹಣವನ್ನೆಲ್ಲ ನಿಷ್ಟ್ರಯೋಜನÀ ವ್ಯವಹಾರಗಳಲ್ಲಿ, ಧಿಡೀರ್ ಶ್ರೀಮಂತರಾಗುವ ಯೋಜನೆಗಳಲ್ಲಿ ಪೋಲು ಮಾಡಬಹುದು. 
ಉನ್ಮತ್ತತೆಯ ಮುಖ್ಯ ಲಕ್ಷಣ ಭಾವವಿಕಾರ. ಉನ್ಮತ್ತರ ಮನಃಸ್ಥಿತಿಯ ಲಕ್ಷಣಗಳೆಂದರೆ ಭಾರೀ ಉದ್ರಿಕ್ತತೆ, ಅಪರಿಮಿತವಾದ ಆನಂದ, ಮಹೋನ್ನತವಾದ ಉಲ್ಲಾಸ, ಉತ್ಸಾಹ, ಊಹಿಸಲಾರದಂಥ ಶಕ್ತಿ ಸಾಮರ್ಥ್ಯ, ತನ್ನನ್ನು ಬಿಟ್ಟರೆ ಇಲ್ಲ-ಎಂಬ ಆತ್ಮವಿಶ್ವಾಸ. ಜೊತೆಗೇ ಕಂಡುಬರುವ ಲಕ್ಷಣಗಳೆಂದರೆ ತಾನು ಜಗತ್ತನ್ನಾಳುವ ಪ್ರಭು, ಮಾನಸಿಕ ಆಸ್ಪತ್ರೆ ಸೇರಿರುವುದು ಇಲ್ಲಿರುವ ಹುಚ್ಚರನ್ನು ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಗುಣಪಡಿಸಲು, ವೈದ್ಯರೇ ಹುಚ್ಚರು-ಎಂಬಿತ್ಯಾದಿ ಭ್ರಾಂತಿಗಳು.

ಉನ್ಮತ್ತರ ಕಾರ್ಯಭಾರ ಅಪಾರ. ಒಂದು ಕ್ಷಣವೂ ಅವರಿಗೆ ಬಿಡುವಿಲ್ಲ. ಉಪಯುಕ್ತವಲ್ಲದ ನೂರೆಂಟು ಕೆಲಸಗಳನ್ನು ಆ ಕ್ಷಣವೇ ಅವರು ಮಾಡಿ ಮುಗಿಸಲೇಬೇಕು. ಆದರೆ ಒಂದು ಕೆಲಸಕ್ಕೆ ಕೈ ಹಾಕುವುದರೊಳಗೆ ಇನ್ನೊಂದು ಅವರ ಗಮನ ಸೆಳೆಯುವುದರಿಂದ ದಿನಗಟ್ಟಲೆ ಬಿಡುವಿಲ್ಲದೆ ದುಡಿದರೂ ಇವರು ಏನೊಂದನ್ನೂ ಸಾಧಿಸುವುದಿಲ್ಲ. ತಮ್ಮ ಓಡಾಟದ ರಭಸದಲ್ಲಿ, ಖುಷಿಯಲ್ಲಿ ಇವರು ಜನರನ್ನು ಘಾಸಿಗೊಳಿಸಬಹುದು. ಕುರ್ಚಿ ಮೇಜು ಮುರಿದು ಹಾಕಬಹುದು; ತಮ್ಮ ಕೈಕಾಲನ್ನೇ ಮುರಿದುಕೊಳ್ಳಬಹುದು. ಇವರ ಮಾತಿಗಂತೂ ಕೊನೆಯಿಲ್ಲ. ಹಲವೊಮ್ಮೆ ಉನ್ಮತ್ತರ ಮಾತು ಕೇಳಲು ರಂಜಿಸುತ್ತದೆ ; ಆದರೆ ಉನ್ಮತ್ತತೆ ಹೆಚ್ಚಾದಂತೆ ಮಾತು ಬರೀ ಬಡಬಡಿಕೆಯಾಗುತ್ತದೆ.

ಉನ್ಮತ್ತತೆ ಇನ್ನೂ ಹೆಚ್ಚಾಗಿ, ಉನ್ಮಾದಸನ್ನಿ ಉಂಟಾದಾಗ ರೋಗಿಗಳಿಗೆ ಅವರ ನಡೆನುಡಿಯ ಮೇಲೆ ಇದ್ದಬದ್ದ ಹತೋಟಿಯೂ ತಪ್ಪಿಹೋಗುತ್ತದೆ. ರೋಗಿಗಳು ಪುರ್ತಿ ಗೊಂದಲಗೊಂಡು, ತಾವೆಲ್ಲಿದ್ದೇವೆ, ತಮ್ಮ ಸುತ್ತ ಏನಾಗುತ್ತಿದೆ ಎಂಬುದೊಂದರ ಪ್ರಜ್ಞೆಯೂ ಇಲ್ಲದೆ ಹಾಡುತ್ತ, ಕುಣಿಯುತ್ತ, ಕಿರುಚುತ್ತ, ಕೈಗೆ ಸಿಕ್ಕಿದ್ದನ್ನು ಮುರಿಯುತ್ತ, ಎಸೆಯುತ್ತ, ಕಂಡವರನ್ನು ಬೈಯ್ಯುತ್ತ, ಹೊಡೆಯುತ್ತ, ಮನೆ ತುಂಬ ಮೂತ್ರ ಮಾಡುತ್ತ, ಮಲವಿಸರ್ಜಿಸಿ ಎಸೆಯುತ್ತ ಜೀವದ ಪರಿವೆ ಇಲ್ಲದೆ ಜಿಗಿದಾಡುತ್ತಿರಬಹುದು. ಇವರು ಕೇಳಿದ್ದೇನಾದರೂ ಇಲ್ಲ ಎಂದರೆ, ಹೇಳಿದ್ದೇನಾದರೂ ಸುಳ್ಳು ಎಂದರೆ ಎಗರಿ ಬೀಳಬಹುದು. ಹಲವರಲ್ಲಿ ಈ ಉನ್ಮಾದ ಸನ್ನಿ ಕ್ರಮೇಣ ಕಡಿಮೆಯಾಗಿ ಖಿನ್ನತೆಗೆ ಎಡೆಗೊಡಬಹುದು.

ಖಿನ್ನತೆಯ ಸ್ಥಿತಿಯಲ್ಲಿ ಇವರ ಚಿತ್ರ ಇನ್ನೂ ಕರುಣಾಮಯವಾಗುತ್ತದೆ. ಹಲವರು ಒಂದೇ ಸಮನೆ ಅಳುತ್ತಾರೆ. ಹಲಬಗೆಯ ಪಾಪಗಳನ್ನು ತಮ್ಮ ಮೇಲೆ ಆರೋಪಿಸಿಕೊಳ್ಳುತ್ತಾರೆ. ಈ ಪಾಪಿಜನ್ಮಕ್ಕೆ ಏನೂ ಬೇಡವೆಂದು ಉಣ್ಣಲೂ ಕುಡಿಯಲೂ ನಿರಾಕರಿಸುತ್ತಾರೆ. ಅಂಥವರಿಗೆ ಕೊಳವೆಯಿಂದ ಆಹಾರ ಕೊಡಬೇಕಾದದ್ದು ಅನಿವಾರ್ಯ. ಇಂಥವರು ಜೀವಕ್ಕೆ ಅಪಾಯ ತಂದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕಾದ್ದೂ ಅವಶ್ಯ. ಉನ್ಮಾದವಿಷಣ್ಣತಾ ಸ್ಥಿತಿಗಳು ಒಂದಾದ ಮೇಲೊಂದರಂತೆ ನಾನಾ ಬಗೆಯಾಗಿ ಪುನರಾವರ್ತಿಸುತ್ತವೆ. ಕೆಲವರಿಗೆ ಒಂದೇ ಸ್ಥಿತಿ ಇರುತ್ತದೆ. ಇಂಥ ಎರಡು ಸ್ಥಿತಿಗಳ ನಡುವೆ ಅವರು ಸಹಜವಾಗಿ ಬದುಕುತ್ತಾರೆ. ಇನ್ನು ಕೆಲವರಿಗೆ ಒಮ್ಮೆ ವಿಷಣ್ಣತೆ, ಆಮೇಲೆ ಸಹಜತೆ, ಅನಂತರ ಉನ್ಮಾದ-ಹೀಗೆ ಈ ಸ್ಥಿತಿಗಳು ಪುನರಾವರ್ತಿಸುವುದೂ ಉಂಟು. 

ಉನ್ಮಾದವಿಷಣ್ಣತಾ ಮನೋವಿಕ್ಷಿಪ್ತಿಗೆ ಒಳಗಾದವರನೇಕರು ಗುಣಹೊಂದಬಹುದು. ಕ್ಲಿಫರ್ಡ್ ಬೀಕ್ಸ್‌ ಇಂಥವರಲ್ಲೊಬ್ಬ. ಈತ ಮನೋರೋಗದ ಆಸ್ಟತ್ರೆಯಲ್ಲಿನ ತನ್ನ ಅನುಭವಗ ಳನ್ನು ಕುರಿತು ಪುಸ್ತಕ ಬರೆದಿದ್ದಾನೆ. ಇಂಥವರ ಅನುಭವಗಳ ಆಧಾರದ ಮೇಲೆ ಈ ವ್ಯಾಧಿಯನ್ನು ತಡೆಗಟ್ಟಲು ನಾನಾ ಕ್ರಮ ಕೈಗೊಳ್ಳಲಾಗಿದೆ. 

ಬೀಕ್ಸ್‌ನಂಥ ಜನ ಅನುಭವಿಸಿದ ತೀವ್ರ ಉನ್ಮಾದ ವಿಷಣ್ಣತಾ ಅನುಭವಗಳು ಪಾಶ್ಚಾತ್ಯರ ಲ್ಲಂತೂ ಈಗ ತುಂಬ ವಿರಳ. ಬಿಕ್ಕಟ್ಟು ಉದ್ರೇಕಗಳನ್ನು ತಣಿಸಬಲ್ಲ ನೆಮ್ಮದಿಕಾರಕಗಳನ್ನು ಬಳಸಲಾಗುತ್ತಿರುವುದರಿಂದ ಇದು ಹದ್ದುಬಸ್ತಿಗೆ ಒಳಪಟ್ಟಿದೆ. ವಿಷಣ್ಣತೆ ಅತಿಯಾಗಿ, ಇವುಗಳಿಂದ ಅಷ್ಟೇನೂ ಪರಿಣಾಮ ಆಗದಾಗ, ವಿದ್ಯುದಾಘಾತ ಚಿಕಿತ್ಸೆ ಕೊಟ್ಟು ಗುಣಪಡಿಸಲಾಗಿದೆ. ರೋಗಿಯ ಮಿದುಳಿನ ಮೂಲಕ ಲಘು ವಿದ್ಯುತ್ ಪ್ರವಾಹ ಹರಿಸಿದಾಗ ಆತ ಸ್ವಲ್ಪ ಒದರಾಡಿ ಪ್ರಜ್ಞೆ ತಪ್ಪುತ್ತಾನೆ. ಹಲವಾರು ಬಾರಿ ಇಂಥ ಚಿಕಿತ್ಸೆ ನಡೆಸಿದ ಮೇಲೆ ರೋಗಿ ಗುಣಮುಖನಾಗುತ್ತಾನೆ. ಇದರ ಜೊತೆಗೆ ನೆಮ್ಮದಿಕಾರಕಗಳನ್ನೂ ಕೊಡಬಹುದು. 
ವಿಷಣ್ಣತಾ ಸ್ಥಿತಿಯ ಮೇಲೆ ವಿದ್ಯುದಾಘಾತ ಚಿಕಿತ್ಸೆಯ ಈ ಸತ್ಪರಿಣಾಮಕ್ಕೆ ಕಾರಣಗಳೇನೆಂಬುದು ಮಾತ್ರ ಇನ್ನೂ ಗೊತ್ತಿಲ್ಲ. 	(ಎಂ.ಎನ್.ಎಚ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ